ಉಡುಪಿ: ಮಳೆಗಾಲದ ಎರಡು ತಿಂಗಳ ಮೀನುಗಾರಿಕೆ ರಜೆ ಪೂರ್ಣಗೊಂಡಿದ್ದು, ಪಶ್ಚಿಮ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಚುರುಕುಗೊಂಡಿದೆ. ಬೃಹತ್ ಗಾತ್ರದ ಯಾಂತ್ರಿಕೃತ ಮೀನುಗಾರಿಕಾ ಬೋಟುಗಳು ಕಡಲಿಗಿಳಿದಿರುವ ಹಿನ್ನೆಲೆಯಲ್ಲಿ ಉತ್ತಮ ಮೀನುಗಾರಿಕೆ ಹಾಗೂ ಮೀನುಗಾರರ ಸುರಕ್ಷತೆಗಾಗಿ ಮಲ್ಪೆಯಲ್ಲಿ ಶ್ರಾವಣ ಹುಣ್ಣಿಮೆಯಂದು ಸಮುದ್ರ ಪೂಜೆ ನೆರವೇರಿಸಲಾಯಿತು.
ಮಲ್ಪೆಯ ವಡಭಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೀನುಗಾರ ಮುಖಂಡರು ಹಾಗೂ ಮೀನುಗಾರರು ಮೆರವಣಿಗೆಯಲ್ಲಿ ಸಮುದ್ರ ತೀರಕ್ಕೆ ತೆರಳಿದರು. ಅಲ್ಲಿ ಸಮುದ್ರರಾಜನಿಗೆ ಆರತಿ ಬೆಳಗಿಸಿ, ಉತ್ತಮ ಮೀನುಗಾರಿಕೆ ಹಾಗೂ ಯಾವುದೇ ಅನಾಹುತ ಸಂಭವಿಸದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಸಮುದ್ರಕ್ಕೆ ಹಾಲು, ಎಳನೀರು ಹಾಗೂ ಹೂವುಗಳನ್ನು ಸಮರ್ಪಿಸಿ ಪೂಜೆ ನೆರವೇರಿಸಲಾಯಿತು. ಪ್ರಕೃತಿಯ ಸಹಕಾರದಿಂದ ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಉತ್ತಮ ಮೀನುಗಾರಿಕೆ ದೊರೆಯಬೇಕು ಮತ್ತು ಕಡಲಿನಲ್ಲಿ ಯಾವುದೇ ಅವಘಡಗಳು ಸಂಭವಿಸದೆ ಮೀನುಗಾರರು ಸುರಕ್ಷಿತವಾಗಿ ಮರಳುವಂತಾಗಬೇಕು ಎಂದು ಪ್ರಾರ್ಥಿಸಲಾಯಿತು.
ಶ್ರಾವಣ ಹುಣ್ಣಿಮೆಯಂದು ಪ್ರತಿವರ್ಷ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಮುಂದಿನ ಮಳೆಗಾಲದವರೆಗೆ ಆಳ ಸಮುದ್ರ ಮೀನುಗಾರಿಕೆ ನಡೆಯಲಿದ್ದು, ಸಾವಿರಾರು ಮೀನುಗಾರರು ಕಡಲಿಗಿಳಿಯಲಿದ್ದಾರೆ. ಕರಾವಳಿಯ ಆರ್ಥಿಕ ಚಟುವಟಿಕೆಯಲ್ಲಿ ಮೀನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ.
ಬೈಟ್: ದಯಾನಂದ ಸುವರ್ಣ, ಮೀನುಗಾರ ಮುಖಂಡ.















