ಸಣ್ಣ ಪುಟ್ಟ ಸಮಸ್ಯೆಗಳಿಗೂ ಮದ್ದು ತಗೊಳ್ಳುವ ಅಭ್ಯಾಸ ಇದ್ರೆ ಬಿಟ್ಟು ಬಿಡಿ: ರಾಜ್ಯದಲ್ಲೀಗ ಕಳಪೆ ಔಷಧಗಳದ್ದೇ ಸದ್ದು,98 ಕಳಪೆ ಗುಣಮಟ್ಟದ ಔಷಧ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕಳಪೆ ಗುಣಮಟ್ಟದ ಔಷಧಗಳ ಪೂರೈಕೆ ಆತಂಕ ಮೂಡಿಸಿದ್ದು, 2021ರಿಂದ 2026ರ ಆಗಸ್ಟ್‌ವರೆಗೆ ಒಟ್ಟು 98 ಔಷಧಗಳು ನಿಗದಿತ ಗುಣಮಟ್ಟದ ಮಾನದಂಡ (NSQ) ಪರೀಕ್ಷೆಯಲ್ಲಿ ವಿಫಲವಾಗಿವೆ. ಮಾತ್ರೆ, ಸಿರಪ್, ಟಾನಿಕ್ ಸೇರಿದಂತೆ ವಿವಿಧ ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವುದು ಬೆಳಕಿಗೆ ಬಂದಿದೆ.

ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾದ ಕೆಲವು ಔಷಧಗಳಲ್ಲೂ ಗುಣಮಟ್ಟದ ಲೋಪ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೂರೈಕೆಯಲ್ಲಿ 26 ಔಷಧ ಕಂಪನಿಗಳ ಲೋಪ ದಾಖಲಾಗಿದ್ದು, ಈ ಪೈಕಿ ಕೇವಲ 6 ಕಂಪನಿಗಳ ವಿರುದ್ಧ ಮಾತ್ರ ಕಾನೂನು ಕ್ರಮಕ್ಕೆ ಅನುಮತಿ ದೊರೆತಿದೆ ಎನ್ನಲಾಗಿದೆ.

15 ಔಷಧಗಳು ಕಪ್ಪುಪಟ್ಟಿಗೆ

2020-21ರಿಂದ 2025-26ರವರೆಗೆ 15 ಕಳಪೆ ಗುಣಮಟ್ಟದ ಔಷಧಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದರೆ ಉಳಿದ ಕಂಪನಿಗಳ ವಿರುದ್ಧ ಪರಿಣಾಮಕಾರಿ ಕಾನೂನು ಕ್ರಮ ಕೈಗೊಳ್ಳಲು ಇನ್ನೂ ಅನುಮತಿ ದೊರೆತಿಲ್ಲ ಎಂಬ ಆರೋಪ ಕೇಳಿಬಂದಿದೆ.

ದಾಖಲೆಗಳ ಪ್ರಕಾರ ಹಿಮಾಚಲ ಪ್ರದೇಶ ಮೂಲದ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹರಿಯಾಣ, ಉತ್ತರಾಖಂಡ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ಹಾಗೂ ಕರ್ನಾಟಕದ ಕಂಪನಿಗಳೂ ಪಟ್ಟಿಯಲ್ಲಿವೆ. ವಿವಿಧ ಕಂಪನಿಗಳ ಔಷಧಗಳ ಬ್ಯಾಚ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಗುಣಮಟ್ಟದ ಲೋಪಗಳು ಬಹಿರಂಗವಾಗಿವೆ.

2024ರಲ್ಲಿ ಅತಿ ಹೆಚ್ಚು NSQ ಔಷಧ

ವರ್ಷವಾರು ಅಂಕಿಅಂಶಗಳ ಪ್ರಕಾರ 2021ರಲ್ಲಿ 16, 2022ರಲ್ಲಿ 15, 2023ರಲ್ಲಿ 12, 2024ರಲ್ಲಿ 31, 2025ರಲ್ಲಿ 21 ಹಾಗೂ 2026ರ ಆಗಸ್ಟ್‌ 18ರವರೆಗೆ 3 NSQ ಔಷಧಗಳು ಪತ್ತೆಯಾಗಿವೆ.

ಒಟ್ಟು 98 ಔಷಧಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿಲ್ಲ. 2024ರಲ್ಲಿ ಅತಿ ಹೆಚ್ಚು 31 ಔಷಧಗಳು ಪರೀಕ್ಷೆಯಲ್ಲಿ ವಿಫಲವಾಗಿರುವುದು ಗಮನಾರ್ಹವಾಗಿದೆ.

ಸರ್ಕಾರಿ ಆಸ್ಪತ್ರೆಗಳ ಔಷಧಗಳ ಬಗ್ಗೆಯೂ ಆತಂಕ

ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗುವ ಔಷಧಗಳಲ್ಲೂ ಗುಣಮಟ್ಟದ ಲೋಪ ಕಂಡುಬಂದಿರುವುದು ಗಂಭೀರ ವಿಚಾರವಾಗಿದೆ. ಗುಣಮಟ್ಟವಿಲ್ಲದ ಔಷಧಗಳ ಬಳಕೆಯಿಂದ ಚಿಕಿತ್ಸೆಯ ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ರೋಗಿಗಳ ಆರೋಗ್ಯದ ಮೇಲೂ ಅಪಾಯ ಉಂಟಾಗಬಹುದು.

ಹೀಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗುವ ಔಷಧಗಳ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವುದು ಹಾಗೂ ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

ಔಷಧ ಖರೀದಿಸುವಾಗ ಎಚ್ಚರಿಕೆ ವಹಿಸಿ

ಸಾರ್ವಜನಿಕರು ಔಷಧ ಖರೀದಿಸುವಾಗ ಎಕ್ಸ್‌ಪೈರಿ ದಿನಾಂಕ, ಬ್ಯಾಚ್ ಸಂಖ್ಯೆ ಹಾಗೂ ದರ ಪರಿಶೀಲಿಸಬೇಕು. ವೈದ್ಯರ ಸಲಹೆ ಅಥವಾ ಪ್ರಿಸ್ಕ್ರಿಪ್ಷನ್‌ನಂತೆ ಮಾತ್ರ ಔಷಧ ಸೇವಿಸುವುದು ಸೂಕ್ತ. ವೈದ್ಯರ ಸಲಹೆಯಿಲ್ಲದೆ ಮತ್ತೊಬ್ಬರಿಗೆ ಸೂಚಿಸಲಾದ ಔಷಧವನ್ನು ಬಳಸಬಾರದು.

ಅವಧಿ ಮೀರಿದ ಅಥವಾ ಸಂಶಯಾಸ್ಪದ ಔಷಧಗಳನ್ನು ಬಳಸದೆ, ನಂಬಿಕಸ್ತ ಔಷಧಾಲಯಗಳಿಂದ ಮಾತ್ರ ಔಷಧ ಖರೀದಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಆರು ವರ್ಷಗಳಲ್ಲಿ 98 NSQ ಔಷಧಗಳು ಪತ್ತೆಯಾಗಿರುವುದು ಔಷಧಗಳ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಎತ್ತಿ ತೋರಿಸಿದೆ. 26 ಕಂಪನಿಗಳ ಪೈಕಿ ಕೇವಲ 6ರ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ದೊರೆತಿರುವುದೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಳಿದ ಕಂಪನಿಗಳ ವಿರುದ್ಧವೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.