ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಚಿಪ್ಸ್, ಕೂಲ್ಡ್ರಿಂಕ್ಸ್ ಸೇರಿದಂತೆ ಪ್ಯಾಕೆಟ್ ಆಹಾರಗಳ ಮೇಲೆ ಗ್ರಾಹಕರಿಗೆ ಎಚ್ಚರಿಕೆ ನೀಡಲು ಮುಂಭಾಗದಲ್ಲಿ ಕೆಂಪು ಬಣ್ಣದ ಲೇಬಲ್ ಅಳವಡಿಸುವ ಪ್ರಸ್ತಾವದಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಿಂದೆ ಸರಿದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಆಹಾರ ಉದ್ಯಮದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಪ್ಯಾಕೆಟ್ಗಳ ಮುಂಭಾಗದಲ್ಲಿ ಕೆಂಪು-ಹಸಿರು ಬಣ್ಣದ ಪೌಷ್ಟಿಕಾಂಶ ಎಚ್ಚರಿಕೆ ಲೇಬಲ್ ಅಳವಡಿಸುವುದಕ್ಕೆ ಆಹಾರ ಕಂಪನಿಗಳು ವಿರೋಧ ವ್ಯಕ್ತಪಡಿಸಿದ್ದವು. ಇಂತಹ ಲೇಬಲ್ಗಳು ಗ್ರಾಹಕರಲ್ಲಿ ಗೊಂದಲ ಮೂಡಿಸಬಹುದು. ಇದರ ಬದಲು ಆಹಾರದ ಪ್ರಮಾಣ ಹಾಗೂ ಆರೋಗ್ಯಕರ ಆಹಾರ ಸೇವನೆಯ ಕುರಿತು ಜಾಗೃತಿ ಮೂಡಿಸುವುದು ಹೆಚ್ಚು ಪರಿಣಾಮಕಾರಿ ಎಂದು ಉದ್ಯಮದ ಪ್ರತಿನಿಧಿಗಳು ವಾದಿಸಿದ್ದರು.

ಭಾರತಕ್ಕೆ ಒಂದು ರೆಸಿಪಿ, ವಿದೇಶಕ್ಕೆ ಮತ್ತೊಂದು?
ಭಾರತದಲ್ಲಿ ಮಾರಾಟವಾಗುವ ಕೆಲವು ಜನಪ್ರಿಯ ಆಹಾರ ಮತ್ತು ಪಾನೀಯಗಳಲ್ಲಿ ಸಕ್ಕರೆ, ಉಪ್ಪು ಹಾಗೂ ಇತರ ಪದಾರ್ಥಗಳ ಪ್ರಮಾಣ ವಿದೇಶಗಳಲ್ಲಿ ಮಾರಾಟವಾಗುವ ಅದೇ ಉತ್ಪನ್ನಗಳಿಗಿಂತ ಹೆಚ್ಚಿದೆ ಎಂಬ ಆರೋಪಗಳು ಕೇಳಿಬಂದಿವೆ. ಉದಾಹರಣೆಗೆ, ಲಂಡನ್ನಲ್ಲಿ ಮಾರಾಟವಾಗುವ ಫ್ಯಾಂಟಾಕ್ಕಿಂತ ಭಾರತದಲ್ಲಿ ಮಾರಾಟವಾಗುವ ಫ್ಯಾಂಟಾದಲ್ಲಿ ಸಕ್ಕರೆ ಪ್ರಮಾಣ ಸುಮಾರು ಮೂರು ಪಟ್ಟು ಹೆಚ್ಚಿದೆ ಎಂದು ರಾಯಿಟರ್ಸ್ ವರದಿ ಉಲ್ಲೇಖಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ‘Food Pharmer’ ಹೆಸರಿನಿಂದ ಜನಪ್ರಿಯರಾಗಿರುವ ರೇವಂತ್ ಹಿಮತ್ಸಿಂಗ್ಕಾ ಅವರು ಭಾರತದಲ್ಲಿ ಮಾರಾಟವಾಗುವ ಫ್ಯಾಂಟಾ ಹಾಗೂ ನೆಸ್ಲೆಯ ಕಿಟ್ಕ್ಯಾಟ್ ಅನ್ನು ಯುರೋಪ್ ಮತ್ತು ಆಸ್ಟ್ರೇಲಿಯಾದ ಆವೃತ್ತಿಗಳೊಂದಿಗೆ ಹೋಲಿಸಿ ಹಲವು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಮಾರಾಟವಾಗುವ ಸಾಮಾನ್ಯ ಕಿಟ್ಕ್ಯಾಟ್ನಲ್ಲಿ ಶೇ.4.5ರಷ್ಟು ಕೋಕೋ ಘನಪದಾರ್ಥವಿದ್ದರೆ, ಆಸ್ಟ್ರೇಲಿಯಾದ ಮಿಲ್ಕ್ ಚಾಕೊಲೇಟ್ ಆವೃತ್ತಿಯಲ್ಲಿ ಕನಿಷ್ಠ ಶೇ.22ರಷ್ಟು ಕೋಕೋ ಇದೆ ಎಂದು ಅವರು ಹೇಳಿದ್ದಾರೆ.
ಬಹುರಾಷ್ಟ್ರೀಯ ಆಹಾರ ಕಂಪನಿಗಳು ಸ್ಥಳೀಯ ನಿಯಮಗಳು, ಗ್ರಾಹಕರ ರುಚಿ ಮತ್ತು ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಒಂದೇ ಉತ್ಪನ್ನದ ವಿಭಿನ್ನ ಆವೃತ್ತಿಗಳನ್ನು ತಯಾರಿಸುವುದು ಸಾಮಾನ್ಯವಾಗಿದೆ. ಆದಾಗ್ಯೂ, ಭಾರತದಲ್ಲಿ ಮಾರಾಟವಾಗುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಗ್ರಾಹಕರಲ್ಲಿ ಪ್ರಶ್ನೆಗಳು ಮೂಡಿವೆ.
ಲೇಬಲ್ ಪರ ಆರೋಗ್ಯ ಕಾರ್ಯಕರ್ತರು
ಆದರೆ, ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಪ್ಯಾಕೆಟ್ಗಳ ಮುಂಭಾಗದಲ್ಲಿರುವ ಸ್ಪಷ್ಟ ಪೌಷ್ಟಿಕಾಂಶ ಎಚ್ಚರಿಕೆ ಲೇಬಲ್ಗಳು ಗ್ರಾಹಕರಿಗೆ ಆರೋಗ್ಯಕರ ಆಹಾರ ಆಯ್ಕೆ ಮಾಡಲು ನೆರವಾಗುತ್ತವೆ ಎಂದು ವಾದಿಸಿದ್ದಾರೆ. ವಿಶ್ವದ ಸುಮಾರು 20 ದೇಶಗಳಲ್ಲಿ ಈಗಾಗಲೇ ಮುಂಭಾಗದ ಪ್ಯಾಕೇಜಿಂಗ್ನಲ್ಲಿ ಬಣ್ಣ ಆಧಾರಿತ ಪೌಷ್ಟಿಕಾಂಶ ಎಚ್ಚರಿಕೆ ವ್ಯವಸ್ಥೆ ಜಾರಿಯಲ್ಲಿದೆ.
ಭಾರತದಲ್ಲೂ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನ ಅಂಶ ಹೆಚ್ಚಿರುವ ಆಹಾರಗಳ ಬಗ್ಗೆ ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುವ ಅಗತ್ಯವಿದೆ ಎಂದು ಆರೋಗ್ಯ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ
ಭಾರತದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿರುವ ನಡುವೆಯೇ ಸಂಸ್ಕರಿತ ಹಾಗೂ ಪ್ಯಾಕೆಟ್ ಆಹಾರಗಳ ಸೇವನೆಯ ಕುರಿತು ಚರ್ಚೆಯೂ ಹೆಚ್ಚಾಗಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ Pharmarack ಪ್ರಕಾರ, ಹಸಿವು ಕಡಿಮೆ ಮಾಡುವ ತೂಕ ಇಳಿಕೆ ಔಷಧಗಳ ಮಾಸಿಕ ಮಾರಾಟವು 2025ರ ಆರಂಭದಿಂದ ಶೇ.400ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಸಂಸ್ಕರಿತ ಆಹಾರಗಳ ವಿರುದ್ಧ ಕಾರ್ಯಕರ್ತರು ಮತ್ತು ಇನ್ಫ್ಲುಯೆನ್ಸರ್ಗಳು ಅಭಿಯಾನ ನಡೆಸುತ್ತಿದ್ದಾರೆ. ಆಹಾರ ಉತ್ಪನ್ನಗಳಲ್ಲಿರುವ ಸಕ್ಕರೆ, ಉಪ್ಪು, ಕೊಬ್ಬು ಹಾಗೂ ಇತರ ಅಂಶಗಳ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ.
2050ರ ವೇಳೆಗೆ 45 ಕೋಟಿ ಭಾರತೀಯರಿಗೆ ಬೊಜ್ಜಿನ ಅಪಾಯ
ಈ ನಡುವೆ, ಪ್ಯಾಕೆಟ್ ಆಹಾರಗಳ ಲೇಬಲಿಂಗ್ಗೆ ಸಂಬಂಧಿಸಿದ FSSAI ನಿರ್ಧಾರವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ ಎಂದು ವರದಿ ತಿಳಿಸಿದೆ. Lancetನಲ್ಲಿ ಪ್ರಕಟವಾದ ಅಧ್ಯಯನವನ್ನು ಉಲ್ಲೇಖಿಸಿರುವ ರಾಯಿಟರ್ಸ್, 2050ರ ವೇಳೆಗೆ ಸುಮಾರು 45 ಕೋಟಿ ಭಾರತೀಯರು ಅಧಿಕ ತೂಕ ಅಥವಾ ಬೊಜ್ಜಿನಿಂದ ಬಳಲುವ ಸಾಧ್ಯತೆಯಿದೆ ಎಂದು ಹೇಳಿದೆ.
ಕಿಟ್ಕ್ಯಾಟ್ ಮತ್ತು ಮ್ಯಾಗಿ ಸೇರಿದಂತೆ ಕೆಲವು ಆಹಾರ ಉತ್ಪನ್ನಗಳ ಭಾರತ ಹಾಗೂ ವಿದೇಶಿ ಮಾರುಕಟ್ಟೆಯ ಆವೃತ್ತಿಗಳಲ್ಲಿರುವ ಪದಾರ್ಥಗಳ ವ್ಯತ್ಯಾಸದ ಬಗ್ಗೆಯೂ ಆರೋಗ್ಯ ಕಾರ್ಯಕರ್ತರು ಪ್ರಶ್ನೆ ಎತ್ತಿದ್ದಾರೆ. ಹೀಗಾಗಿ ಪ್ಯಾಕೆಟ್ ಆಹಾರಗಳ ಗುಣಮಟ್ಟ, ಪೌಷ್ಟಿಕಾಂಶ ಮಾಹಿತಿ ಹಾಗೂ ಲೇಬಲಿಂಗ್ ವಿಚಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.















