ನವದೆಹಲಿ: ಅಹಮದಾಬಾದ್ನಲ್ಲಿ ನಡೆದ ₹1.5 ಕೋಟಿ ಮೊತ್ತದ ‘ಬಾಸ್ ಸ್ಕ್ಯಾಮ್’ ಪ್ರಕರಣದ ತನಿಖೆ ವೇಳೆ ಸುಮಾರು 4,500 ಸಿಮ್ ಕಾರ್ಡ್ಗಳನ್ನು ಒಳಗೊಂಡ ಬೃಹತ್ ಸೈಬರ್ ಅಪರಾಧ ಜಾಲ ಪತ್ತೆಯಾದ ಬೆನ್ನಲ್ಲೇ, ದೇಶಾದ್ಯಂತ ಹೊಸ ಸಿಮ್ ಕಾರ್ಡ್ಗಳ ವಿತರಣಾ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ.
ನಕಲಿ ಸಿಮ್ ಕಾರ್ಡ್ಗಳು, ಸೈಬರ್ ವಂಚನೆ ಹಾಗೂ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ಸಿಮ್ ವಿತರಿಸುವ ಮುನ್ನ ಗ್ರಾಹಕರ ಮಾಹಿತಿಯನ್ನು ರಿಯಲ್ಟೈಮ್ನಲ್ಲಿ ಪರಿಶೀಲಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.
ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ಫಾರ್ಮ್ನಲ್ಲಿ ಪರಿಶೀಲನೆ
ಟೆಲಿಕಾಂ ಕಂಪನಿಗಳು ಸಿಮ್ ಪಡೆಯುವ ಗ್ರಾಹಕರ ವಿವರಗಳನ್ನು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ಫಾರ್ಮ್ ಮೂಲಕ ಪರಿಶೀಲಿಸಬೇಕು. ಅನುಮಾನಾಸ್ಪದ ಅಥವಾ ನಕಲಿ ಗುರುತಿನ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಹೊಸ ಸಿಮ್ ಸಂಪರ್ಕ ನೀಡುವುದನ್ನು ತಡೆಯಲಾಗುತ್ತದೆ.
ಇದರ ಜತೆಗೆ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ಗಳು ನೋಂದಣಿಯಾಗಿವೆ ಎಂಬುದನ್ನೂ ಸರ್ಕಾರದ ಮಟ್ಟದಲ್ಲಿ ಟ್ರ್ಯಾಕ್ ಮಾಡಲಾಗುತ್ತದೆ.
ಗರಿಷ್ಠ 9 ಸಿಮ್ಗಳಿಗೆ ಅವಕಾಶ
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಗರಿಷ್ಠ 9 ಸಿಮ್ ಕಾರ್ಡ್ಗಳನ್ನು ಹೊಂದಲು ಅವಕಾಶವಿರಲಿದೆ. ಆದರೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಈ ಮಿತಿ 6 ಸಿಮ್ ಕಾರ್ಡ್ಗಳಿಗೆ ಸೀಮಿತವಾಗಿರಲಿದೆ.
ನಕಲಿ ಗುರುತಿನ ಆಧಾರದ ಮೇಲೆ ಸಿಮ್ ಕಾರ್ಡ್ಗಳನ್ನು ಪಡೆಯುವುದು, ಸೈಬರ್ ವಂಚನೆ ನಡೆಸುವುದು ಹಾಗೂ ‘ಡಿಜಿಟಲ್ ಅರೆಸ್ಟ್’ನಂತಹ ವಂಚನೆಗಳಿಗೆ ನಕಲಿ ಸಂಪರ್ಕಗಳನ್ನು ಬಳಸುವುದನ್ನು ನಿಯಂತ್ರಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.
ಹೊಸ ಸಿಮ್ ಖರೀದಿಗೆ ಟಫ್ ರೂಲ್ಸ್ ಏನು?
- ಹೊಸ ಸಿಮ್ ಕಾರ್ಡ್ ನೀಡುವ ಮೊದಲು ಗ್ರಾಹಕರ ರಿಯಲ್ಟೈಮ್ ಪರಿಶೀಲನೆ ಕಡ್ಡಾಯ.
- ಟೆಲಿಕಾಂ ಆಪರೇಟರ್ಗಳು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ಫಾರ್ಮ್ ಮೂಲಕ ಗ್ರಾಹಕರ ವಿವರಗಳನ್ನು ಪರಿಶೀಲಿಸಬೇಕು.
- ಅನುಮಾನಾಸ್ಪದ ಅಥವಾ ನಕಲಿ ಗುರುತಿನ ದಾಖಲೆ ಹೊಂದಿರುವವರಿಗೆ ಹೊಸ ಸಿಮ್ ಸಂಪರ್ಕ ನೀಡುವುದನ್ನು ನಿರ್ಬಂಧಿಸಲಾಗುತ್ತದೆ.
- ಪ್ರತಿಯೊಬ್ಬ ವ್ಯಕ್ತಿಯ ಹೆಸರಿನಲ್ಲಿ ನೋಂದಣಿಯಾಗಿರುವ ಸಿಮ್ ಕಾರ್ಡ್ಗಳ ಸಂಖ್ಯೆಯನ್ನು ಸರ್ಕಾರ ಟ್ರ್ಯಾಕ್ ಮಾಡಲಿದೆ.
- ಸಾಮಾನ್ಯ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿಗೆ ಗರಿಷ್ಠ 9 ಸಿಮ್ ಕಾರ್ಡ್ಗಳು; ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಗರಿಷ್ಠ 6 ಸಿಮ್ ಕಾರ್ಡ್ಗಳು.
- ನಕಲಿ ಸಿಮ್ಗಳು, ಸೈಬರ್ ವಂಚನೆ ಹಾಗೂ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಿಗೆ ಕಡಿವಾಣ ಹಾಕುವುದು ಈ ನಿಯಮಗಳ ಪ್ರಮುಖ ಉದ್ದೇಶ.















