110 ದೇಶಗಳ ಐಫೋನ್ ಬಳಕೆದಾರರಿಗೆ ಆಪಲ್‌ನಿಂದ ಥ್ರೆಟ್ ಅಲರ್ಟ್: ಸ್ಪೈವೇರ್ ದಾಳಿ ಬಗ್ಗೆ ಎಚ್ಚರಿಕೆ ಸಂದೇಶ ಬಂದಾಗ ಏನು ಮಾಡಬೇಕು?

ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿರುವ ಮರ್ಸಿನರಿ ಸ್ಪೈವೇರ್ ದಾಳಿಯ ಸಾಧ್ಯತೆ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆ 110 ದೇಶಗಳ ಐಫೋನ್ ಬಳಕೆದಾರರಿಗೆ ಭದ್ರತಾ ಎಚ್ಚರಿಕೆ (Threat Notification) ರವಾನಿಸಿದೆ.

ಪರದೆ ಮೇಲೆ ಕಾಣಿಸಿಕೊಳ್ಳುವ ಈ ಥ್ರೆಟ್ ನೋಟಿಫಿಕೇಶನ್‌ನ ಅರ್ಥವೇನು, ಯಾರಿಗೆ ಇಂತಹ ಎಚ್ಚರಿಕೆ ಬರುತ್ತದೆ ಹಾಗೂ ನೋಟಿಫಿಕೇಶನ್ ಬಂದರೆ ಬಳಕೆದಾರರು ಯಾವ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬುದು ಇದೀಗ ಚರ್ಚೆಗೆ ಕಾರಣವಾಗಿದೆ.

ಥ್ರೆಟ್ ನೋಟಿಫಿಕೇಶನ್ ಎಂದರೇನು?

ಆಪಲ್‌ನ ಥ್ರೆಟ್ ನೋಟಿಫಿಕೇಶನ್ ಸಾಮಾನ್ಯ ವೈರಸ್ ಅಥವಾ ಸೈಬರ್ ಅಪರಾಧದ ಎಚ್ಚರಿಕೆಯಲ್ಲ. ನಿರ್ದಿಷ್ಟ ವ್ಯಕ್ತಿಯನ್ನು ಅತ್ಯಾಧುನಿಕ ಸ್ಪೈವೇರ್ ಮೂಲಕ ಗುರಿಯಾಗಿಸಿಕೊಂಡಿರುವ ಸಾಧ್ಯತೆ ಕಂಡುಬಂದಾಗ ಆಪಲ್ ಈ ರೀತಿಯ ಎಚ್ಚರಿಕೆಯನ್ನು ನೀಡುತ್ತದೆ.

ಮರ್ಸಿನರಿ ಸ್ಪೈವೇರ್‌ಗಳು ಅತ್ಯಂತ ಸಂಕೀರ್ಣವಾಗಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿ ಕಾರ್ಯಾಚರಣೆ ನಡೆಸಲು ದೊಡ್ಡ ಪ್ರಮಾಣದ ಹಣ ಮತ್ತು ತಾಂತ್ರಿಕ ಪರಿಣತಿ ಅಗತ್ಯವಿರುತ್ತದೆ. ಇವು ಕೆಲವೊಮ್ಮೆ ಅಲ್ಪಾವಧಿಗೆ ಮಾತ್ರ ಸಕ್ರಿಯವಾಗಿರುವುದರಿಂದ ಪತ್ತೆಹಚ್ಚುವುದು ಮತ್ತು ತಡೆಯುವುದು ಸವಾಲಿನ ಕೆಲಸವಾಗಿದೆ.

ಯಾರನ್ನು ಗುರಿಯಾಗಿಸಲಾಗುತ್ತದೆ?

ಇಂತಹ ಸ್ಪೈವೇರ್‌ಗಳು ಸಾಮಾನ್ಯವಾಗಿ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು, ರಾಜತಾಂತ್ರಿಕರು ಹಾಗೂ ಇತರ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಬಹುದು. ಎನ್‌ಎಸ್‌ಒ ಗ್ರೂಪ್‌ನ ‘ಪೆಗಾಸಸ್’ನಂತಹ ಸ್ಪೈವೇರ್‌ಗಳನ್ನು ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿ ಸರ್ಕಾರಿ ಸಂಸ್ಥೆಗಳು ಅಥವಾ ಇತರ ಗ್ರಾಹಕರಿಗೆ ಒದಗಿಸುತ್ತವೆ ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿವೆ.

ನೋಟಿಫಿಕೇಶನ್ ಬಂದರೆ ಏನು ಮಾಡಬೇಕು?

ನಿಮ್ಮ ಐಫೋನ್‌ನಲ್ಲಿ ಥ್ರೆಟ್ ನೋಟಿಫಿಕೇಶನ್ ಕಾಣಿಸಿಕೊಂಡರೆ ಗಾಬರಿಯಾಗುವ ಅಗತ್ಯವಿಲ್ಲ. ಆದರೆ ಅದನ್ನು ನಿರ್ಲಕ್ಷಿಸಬಾರದು. ಸಾಧ್ಯವಾದಷ್ಟು ಬೇಗ Lockdown Mode ಅನ್ನು ಸಕ್ರಿಯಗೊಳಿಸುವುದು, ಸಾಧನವನ್ನು ಇತ್ತೀಚಿನ ಸಾಫ್ಟ್‌ವೇರ್ ಆವೃತ್ತಿಗೆ ಅಪ್‌ಡೇಟ್ ಮಾಡುವುದು ಮತ್ತು ಆಪಲ್ ಐಡಿ ಸೇರಿದಂತೆ ಪ್ರಮುಖ ಖಾತೆಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸುವುದು ಸೂಕ್ತ.

ಅಗತ್ಯವಿದ್ದರೆ ಸೈಬರ್‌ ಸೆಕ್ಯುರಿಟಿ ತಜ್ಞರು ಅಥವಾ ಸಂಬಂಧಿತ ಅಧಿಕಾರಿಗಳ ನೆರವು ಪಡೆಯಬೇಕು.

ಡಿಜಿಟಲ್ ಸುರಕ್ಷತೆಗೆ ಈ ಮುನ್ನೆಚ್ಚರಿಕೆ ಪಾಲಿಸಿ

ಸಾಮಾನ್ಯ ಬಳಕೆದಾರರು ಇಂತಹ ಅತ್ಯಾಧುನಿಕ ಸ್ಪೈವೇರ್ ದಾಳಿಗೆ ಗುರಿಯಾಗುವ ಸಾಧ್ಯತೆ ಕಡಿಮೆ. ಆದರೂ ಡಿಜಿಟಲ್ ಸುರಕ್ಷತೆಗಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಅಗತ್ಯ.

  • ಮೊಬೈಲ್ ಮತ್ತು ಇತರ ಸಾಧನಗಳನ್ನು ಯಾವಾಗಲೂ ಇತ್ತೀಚಿನ OS ಹಾಗೂ ಸೆಕ್ಯುರಿಟಿ ಪ್ಯಾಚ್‌ಗಳೊಂದಿಗೆ ಅಪ್‌ಡೇಟ್ ಮಾಡಿಕೊಳ್ಳಿ.
  • ಬಲಿಷ್ಠ ಪಾಸ್‌ಕೋಡ್, Face ID ಅಥವಾ Touch ID ಬಳಸಿ.
  • Apple ಖಾತೆಗೆ Two-Factor Authentication (2FA) ಸಕ್ರಿಯಗೊಳಿಸಿ.
  • Stolen Device Protection ಅನ್ನು ಆನ್ ಮಾಡಿ.
  • ಸಾಧ್ಯವಾದಷ್ಟು ಅಧಿಕೃತ App Storeನಿಂದಲೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ.
  • ಬೆಂಬಲಿಸುವ ಸೇವೆಗಳಲ್ಲಿ Passkeys ಬಳಸಿ.
  • ಅಪರಿಚಿತರಿಂದ ಬರುವ ಇಮೇಲ್, ಮೆಸೇಜ್, ಲಿಂಕ್ ಅಥವಾ ಫೈಲ್‌ಗಳನ್ನು ತೆರೆಯುವ ಮುನ್ನ ಎಚ್ಚರಿಕೆ ವಹಿಸಿ.
  • ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ಅಥವಾ ಅಪರಿಚಿತ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ.