ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರ ಅಧಿಕೃತ ಸರ್ಕಾರಿ ನಿವಾಸದ ನಾಮಫಲಕದಲ್ಲಿ ಪತ್ನಿಯ ಹೆಸರನ್ನು ನಮೂದಿಸಿರುವ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ. ನಾಮಫಲಕದ ತಯಾರಿಕೆ ಹಾಗೂ ಅಳವಡಿಕೆಗೆ ಸರ್ಕಾರಿ ಅನುದಾನ ಬಳಸಲಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ಅಧಿಕೃತ ಸರ್ಕಾರಿ ನಿವಾಸವನ್ನು ಅಧಿಕಾರಿಯ ಹುದ್ದೆಯ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ನಾಮಫಲಕದಲ್ಲಿ ಸಾಮಾನ್ಯವಾಗಿ ಅಧಿಕಾರಿಯ ಹೆಸರು ಮತ್ತು ಅವರು ಹೊಂದಿರುವ ಹುದ್ದೆಯನ್ನು ಮಾತ್ರ ನಮೂದಿಸುವುದು ಆಡಳಿತಾತ್ಮಕ ಶಿಷ್ಟಾಚಾರವಾಗಿದೆ. ಆದರೆ ಜಿಲ್ಲಾಧಿಕಾರಿಯ ಸರ್ಕಾರಿ ನಿವಾಸದ ನಾಮಫಲಕದಲ್ಲಿ ಸಂಗಾತಿಯ ಹೆಸರನ್ನೂ ಸೇರಿಸಿರುವುದು ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಪ್ರತಿಭಾ ಕುಳಾಯಿ ತಮ್ಮ ಮನವಿಯಲ್ಲಿ ಆರೋಪಿಸಿದ್ದಾರೆ.
ನಾಮಫಲಕದ ತಯಾರಿಕೆ ಮತ್ತು ಅಳವಡಿಕೆಗೆ ಸಾರ್ವಜನಿಕ ಹಣವನ್ನು ಬಳಸಿದ್ದರೆ, ಅದು ನಿಯಮಬಾಹಿರವಾಗುವ ಸಾಧ್ಯತೆ ಇದೆ. ಹೀಗಾಗಿ ನಾಮಫಲಕಕ್ಕೆ ಸಂಬಂಧಿಸಿದ ವೆಚ್ಚದ ದಾಖಲೆಗಳು, ಬಿಲ್ಗಳು ಹಾಗೂ ಶಿಷ್ಟಾಚಾರದ ಮಂಜೂರಾತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಒಂದು ವೇಳೆ ನಿಯಮ ಉಲ್ಲಂಘನೆಯಾಗಿರುವುದು ತನಿಖೆಯಲ್ಲಿ ದೃಢಪಟ್ಟರೆ, ನಾಮಫಲಕವನ್ನು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ರಾಜ್ಯದಾದ್ಯಂತ ಇರುವ ಸರ್ಕಾರಿ ನಿವಾಸಗಳ ನಾಮಫಲಕಗಳಿಗೆ ಸಂಬಂಧಿಸಿದಂತೆ ಏಕರೂಪದ ಮಾರ್ಗಸೂಚಿ ಹೊರಡಿಸಬೇಕು ಎಂದು ಪ್ರತಿಭಾ ಕುಳಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.















