ಉಡುಪಿ: ಕಟಪಾಡಿ–ಶಿರ್ವ ಮುಖ್ಯ ರಸ್ತೆಯ ಶಂಕರಪುರ ಸಾಲ್ಮರ ಬಳಿ ಪೊದೆಗಳಿಂದ ಆವೃತವಾಗಿದ್ದ ಬಾವಿಗೆ ಬಿದ್ದು ಐದು ಕಾಡುಹಂದಿಗಳು ಮೃತಪಟ್ಟ ಘಟನೆ ನಡೆದಿದೆ.
ರಸ್ತೆ ಬದಿಯ ವಾಸವಿಲ್ಲದ ಮನೆಯ ಆವರಣ ಗೋಡೆಗೆ ಹೊಂದಿಕೊಂಡಿರುವ ಸಣ್ಣ ಬಾವಿಗೆ ನಾಲ್ಕೈದು ದಿನಗಳ ಹಿಂದೆ ಕಾಡುಹಂದಿಗಳ ಹಿಂಡು ಬಿದ್ದಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ. ಮನೆಯ ಎದುರು ರಸ್ತೆಯ ಇನ್ನೊಂದು ಬದಿಯಲ್ಲಿ ಸೋದೆ ಮಠಕ್ಕೆ ಸೇರಿದ ಖಾಸಗಿ ಅರಣ್ಯ ಪ್ರದೇಶವಿದ್ದು, ರಾತ್ರಿ ವೇಳೆ ಆಹಾರ ಅರಸಿ ಬಂದ ಹಂದಿಗಳು ಬಾವಿಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಬಾವಿಯಲ್ಲಿ ನೀರಿದ್ದು, ಹಂದಿಗಳು ಮೇಲಕ್ಕೆ ಬರಲಾಗದೆ ಮೃತಪಟ್ಟಿವೆ. ಮೃತದೇಹಗಳು ಕೊಳೆತು ದುರ್ವಾಸನೆ ಬಂದ ಬಳಿಕ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಬಾವಿಯಿಂದ ಮೇಲಕ್ಕೆತ್ತಲಾಯಿತು.
ಪಶುವೈದ್ಯಾಧಿಕಾರಿ ಡಾ. ವಿಜಯಕುಮಾರ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಮೇಲಾಧಿಕಾರಿಗಳ ನಿರ್ದೇಶನದಂತೆ ಇಲಾಖೆಯ ನಿಯಮಾನುಸಾರ ಮೃತದೇಹಗಳನ್ನು ದಫನ ಮಾಡಲಾಯಿತು ಎಂದು ಉಪ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಅರಣ್ಯ ಪಾಲಕ ಶ್ರೀನಿವಾಸ ಜೋಗಿ, ಗಸ್ತುಪಾಲಕ ಅಖಿಲೇಶ್ ಹಾಗೂ ಸ್ಥಳೀಯರು ಕಾರ್ಯಾಚರಣೆಗೆ ಸಹಕರಿಸಿದರು.















