ಉಡುಪಿ: ‘ಪತಿಯ ಸಾವು ನಮಗೆ ಆಕಸ್ಮಿಕ ಆಘಾತವಾಗಿದೆ. ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಅವರು ನಮ್ಮೊಂದಿಗೆ ಹೇಳಿಕೊಂಡಿರಲಿಲ್ಲ’ ಎಂದು ಹತ್ಯೆಗೀಡಾದ ಡೇವಿಡ್ ಡಿಸೋಜ ಅವರ ಪತ್ನಿ ಪ್ರಿಯಾ ಡೇವಿಡ್ ಹೇಳಿದರು.
‘ಪ್ರತಿದಿನದಂತೆ ಶುಕ್ರವಾರ ಊಟ ಮುಗಿಸಿ ಕಚೇರಿಗೆ ತೆರಳಿದ್ದರು. ಗುಂಡಿನ ದಾಳಿ ನಡೆದಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಪತಿ ಕುಟುಂಬಕ್ಕೆ ಯಾವುದೇ ಕೊರತೆ ಮಾಡಿರಲಿಲ್ಲ’ ಎಂದು ಅವರು ಹೇಳಿದರು.
‘ಪತಿಯ ಮೇಲೆ ಗುಂಡು ಹಾರಿಸಿ ರಕ್ತ ಚೆಲ್ಲಿದವರಿಗೂ ಅದೇ ರೀತಿಯ ಶಿಕ್ಷೆಯಾಗಬೇಕು. ಪೊಲೀಸರು ಶೀಘ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದು ಸ್ವಲ್ಪ ನೆಮ್ಮದಿ ತಂದಿದೆ. ಆರೋಪಿಗಳು ಹಾಗೂ ಈ ಸಂಚಿನಲ್ಲಿ ಭಾಗಿಯಾದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು’ ಎಂದು ಅವರು ಆಗ್ರಹಿಸಿದರು.
‘ಉದ್ಯಮಿಯಾಗಿ ಹಾಗೂ ರಾಜಕಾರಣಿಯಾಗಿ ಡೇವಿಡ್ ಅವರು ಊರಿನ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದರು. ಅವರ ಹಠಾತ್ ಸಾವಿನಿಂದ ಕುಟುಂಬಕ್ಕೆ ತೀವ್ರ ಆಘಾತವಾಗಿದೆ’ ಎಂದು ಪ್ರಿಯಾ ಡೇವಿಡ್ ತಿಳಿಸಿದ್ದಾರೆ.















