ಬೀಯಿಂಗ್ ಹ್ಯೂಮನ್ ಆಭರಣ ವಂಚನೆ ಪ್ರಕರಣ: ಸಲ್ಮಾನ್ ಖಾನ್, ಸಹೋದರಿಗೆ ನ್ಯಾಯಾಲಯ ಸಮನ್ಸ್

ಚಂಡೀಗಢ: ಬೀಯಿಂಗ್ ಹ್ಯೂಮನ್ ಆಭರಣ ಶೋರೂಮ್‌ಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಅವರಿಗೆ ಚಂಡೀಗಢ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಚಂಡೀಗಢದ ಮಣಿಮಜ್ರಾದಲ್ಲಿರುವ ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಶೋರೂಮ್‌ಗೆ ಸಂಬಂಧಿಸಿದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಸಲ್ಮಾನ್ ಖಾನ್, ಅಲ್ವಿರಾ ಖಾನ್ ಅಗ್ನಿಹೋತ್ರಿ ಹಾಗೂ ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಿಗೆ ಅಕ್ಟೋಬರ್ 5ರಂದು ನ್ಯಾಯಾಲಯಕ್ಕೆ ಹಾಜರಾಗಿ ಆರೋಪಗಳಿಗೆ ಉತ್ತರ ಸಲ್ಲಿಸುವಂತೆ ಸೂಚಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಮೂಲದ ಉದ್ಯಮಿ ಅರುಣ್ ಗುಪ್ತಾ ದೂರು ದಾಖಲಿಸಿದ್ದಾರೆ. ಉತ್ತಮ ವ್ಯವಹಾರದ ಭರವಸೆ ನೀಡಿ ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಶೋರೂಮ್‌ನಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಲಾಗಿತ್ತು. ಆದರೆ ನಂತರ ನೀಡಿದ್ದ ಭರವಸೆಗಳನ್ನು ಪಾಲಿಸದ ಕಾರಣ ತಮಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೂರಿನ ಪ್ರಕಾರ, ಬೀಯಿಂಗ್ ಹ್ಯೂಮನ್ ಆಭರಣಗಳ ಮಾರಾಟ ಪರವಾನಗಿ ಹೊಂದಿದ್ದ ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಅರುಣ್ ಗುಪ್ತಾ ಸುಮಾರು 3 ಕೋಟಿ ರೂ. ಹೂಡಿಕೆ ಮಾಡಿದ್ದರು. ಇದರಲ್ಲಿ ಶೋರೂಮ್ ಸ್ಥಾಪನೆಗೆ ಸುಮಾರು 1 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಒಪ್ಪಂದದ ಎಲ್ಲ ಷರತ್ತುಗಳನ್ನು ತಾವು ಪಾಲಿಸಿದ್ದರೂ, ಕಂಪನಿ ಭರವಸೆ ನೀಡಿದ್ದ ವ್ಯಾಪಾರ ಬೆಂಬಲವನ್ನು ಒದಗಿಸದ ಕಾರಣ ವ್ಯವಹಾರಕ್ಕೆ ಭಾರೀ ಹೊಡೆತ ಬಿದ್ದಿದ್ದು, ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 5ರಂದು ನಡೆಯಲಿದ್ದು, ಅಂದು ಆರೋಪಿಗಳು ನ್ಯಾಯಾಲಯದ ಮುಂದೆ ತಮ್ಮ ಉತ್ತರ ಸಲ್ಲಿಸಲಿದ್ದಾರೆ.