ಮಾನಸಿಕ ಆರೋಗ್ಯಕ್ಕೂ ಲೈಂಗಿಕ ಜೀವನಕ್ಕೂ ಎಷ್ಟೊಂದು ಸಂಬಂಧ ಇದೆ! ಇಲ್ಲಿ ನೋಡಿ

ಜಗತ್ತು ಎಷ್ಟೇ ಮುಂದುವರೆದರೂ ಇಂದಿಗೂ ಕೂಡಾ ಪರಸ್ಪರ ಸಂಗಾತಿಗಳೇ ಲೈಂಗಿಕತೆ, ತಮ್ಮ ಇಷ್ಟ-ಕಷ್ಟಗಳು, ಜೀವನದಲ್ಲಿ ಲೈಂಗಿಕ ಆರೋಗ್ಯ (Sexual Health)ದ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಅದು ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ, ಶಿಕ್ಷಣದ ಪ್ರಭಾವ ಇರಬಹುದು. ಆದರೆ, ಲೈಂಗಿಕತೆ ಹಾಗೂ ಮಾನಸಿಕ ಆರೋಗ್ಯ ಒಂದಕ್ಕೊಂದು ತುಂಬಾ ಸಂಬಂಧಿಸಿದ್ದಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಥವಾ ಈಗಾಗಲೇ ನಿಮಗೆ ಈ ರೀತಿಯ ಅನುಭವವೂ ಆಗಿರಬಹುದು.

ಉತ್ತಮ ಮಾನಸಿಕ ಆರೋಗ್ಯವು ಆರೋಗ್ಯಕರ ಲೈಂಗಿಕ ಜೀವನಕ್ಕೆ ನೆರವಾಗುತ್ತದೆ. ಅದೇ ರೀತಿ, ತೃಪ್ತಿದಾಯಕ ಮತ್ತು ಸುರಕ್ಷಿತ ಲೈಂಗಿಕ ಜೀವನವು ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಹಾಗೂ ಸಂಬಂಧಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ಎರಡರಲ್ಲಿ ಯಾವುದಾದರೂ ಒಂದು ಸಮಸ್ಯೆ ಉಂಟಾದರೆ ಮತ್ತೊಂದರ ಮೇಲೂ ಅದರ ಪರಿಣಾಮ ಬೀರುತ್ತದೆ.

ಮಾನಸಿಕ ಆರೋಗ್ಯ ಏಕೆ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ?

ಒಬ್ಬ ವ್ಯಕ್ತಿ ಒತ್ತಡ, ಆತಂಕ, ಖಿನ್ನತೆ ಅಥವಾ ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅದು ಅವರ ಲೈಂಗಿಕ ಆಸಕ್ತಿ, ಸಾಮರ್ಥ್ಯ ಮತ್ತು ಸಂಬಂಧಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

  • ಲೈಂಗಿಕ ಆಸಕ್ತಿ (Libido) ಕಡಿಮೆಯಾಗಬಹುದು.
  • ಸಂಗಾತಿಯೊಂದಿಗೆ ಭಾವನಾತ್ಮಕ ಸಂಪರ್ಕ ಕುಂದಬಹುದು.
  • ಲೈಂಗಿಕ ಕ್ರಿಯೆಯಲ್ಲಿ ತೃಪ್ತಿ ಕಡಿಮೆಯಾಗಬಹುದು.
  • ಪುರುಷರಲ್ಲಿ ನಿಮಿರುವಿಕೆ ಸಮಸ್ಯೆ (Erectile Dysfunction) ಅಥವಾ ಶೀಘ್ರ ಸ್ಖಲನ ಕಾಣಿಸಿಕೊಳ್ಳಬಹುದು.
  • ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ನೋವು ಅನುಭವಿಸಬಹುದು.

ಲೈಂಗಿಕ ಸಮಸ್ಯೆಗಳು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ

ಲೈಂಗಿಕ ಜೀವನದಲ್ಲಿ ಉಂಟಾಗುವ ಸಮಸ್ಯೆಗಳು ವ್ಯಕ್ತಿಯ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು. ಇದರಿಂದ ಒತ್ತಡ, ಆತಂಕ, ಸಂಬಂಧಗಳಲ್ಲಿ ಬಿರುಕು ಹಾಗೂ ಖಿನ್ನತೆ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಸಾಮಾನ್ಯವಾಗಿ ಕಂಡುಬರುವ ಪರಿಣಾಮಗಳು:

  • ಆತ್ಮಗೌರವ ಕಡಿಮೆಯಾಗುವುದು
  • ನಿರಾಶೆ
  • ಸಂಗಾತಿಯೊಂದಿಗೆ ದೂರವಾಗುವುದು
  • ಕೋಪ ಮತ್ತು ಅಸಮಾಧಾನ
  • ಸಾಮಾಜಿಕ ಜೀವನದಿಂದ ದೂರ ಉಳಿಯುವುದು

ಇಂದಿನ ವೇಗದ ಜೀವನಶೈಲಿ, ಕೆಲಸದ ಒತ್ತಡ, ನಿದ್ರೆಯ ಕೊರತೆ, ಮದ್ಯಪಾನ, ಧೂಮಪಾನ ಹಾಗೂ ವ್ಯಾಯಾಮದ ಕೊರತೆಯೂ ಲೈಂಗಿಕ ಮತ್ತು ಮಾನಸಿಕ ಆರೋಗ್ಯ ಎರಡರ ಮೇಲೂ ಪರಿಣಾಮ ಬೀರುತ್ತವೆ.

ಆದ್ದರಿಂದ:

  • ಪ್ರತಿದಿನ ಸಾಕಷ್ಟು ನಿದ್ರೆ ಮಾಡಬೇಕು.
  • ನಿಯಮಿತ ವ್ಯಾಯಾಮ ಮಾಡಬೇಕು.
  • ಸಮತೋಲನ ಆಹಾರ ಸೇವಿಸಬೇಕು.
  • ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸಬೇಕು.
  • ಒತ್ತಡ ನಿಯಂತ್ರಣಕ್ಕೆ ಧ್ಯಾನ ಅಥವಾ ಯೋಗ ಅಭ್ಯಾಸ ಮಾಡಬೇಕು.

ಲೈಂಗಿಕ ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳು

ನಮ್ಮ ಸಮಾಜದಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ಇನ್ನೂ ಮುಕ್ತ ಚರ್ಚೆ ಕಡಿಮೆ. ಇದರಿಂದ ಅನೇಕರು ಸಮಸ್ಯೆ ಇದ್ದರೂ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯುತ್ತಾರೆ. ಇಂಟರ್ನೆಟ್ ಅಥವಾ ಸ್ನೇಹಿತರ ಸಲಹೆಗಳನ್ನು ನಂಬಿ ಸ್ವಯಂ ಚಿಕಿತ್ಸೆ ಮಾಡುವುದು ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಬಹುದು.

ಕೆಳಗಿನ ಲಕ್ಷಣಗಳು ಕೆಲವು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

  • ಲೈಂಗಿಕ ಆಸಕ್ತಿಯಲ್ಲಿ ಹಠಾತ್ ಬದಲಾವಣೆ
  • ಲೈಂಗಿಕ ಕ್ರಿಯೆಯಲ್ಲಿ ನಿರಂತರ ತೊಂದರೆ
  • ದೀರ್ಘಕಾಲದ ಆತಂಕ ಅಥವಾ ಖಿನ್ನತೆ
  • ಸಂಬಂಧಗಳಲ್ಲಿ ನಿರಂತರ ಭಿನ್ನಾಭಿಪ್ರಾಯ
  • ಲೈಂಗಿಕ ಕ್ರಿಯೆಯ ಬಗ್ಗೆ ಅತಿಯಾದ ಭಯ ಅಥವಾ ಅಪರಾಧ ಭಾವನೆ

ಆರೋಗ್ಯಕರ ದಾಂಪತ್ಯಕ್ಕೆ ಮುಕ್ತ ಸಂವಹನ ಅತ್ಯಗತ್ಯ. ತಮ್ಮ ಭಾವನೆಗಳು, ಅಗತ್ಯಗಳು ಮತ್ತು ಸಮಸ್ಯೆಗಳ ಬಗ್ಗೆ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವ ದಂಪತಿಗಳಲ್ಲಿ ಲೈಂಗಿಕ ತೃಪ್ತಿ ಹೆಚ್ಚಿರುತ್ತದೆ. ತಪ್ಪು ಕಲ್ಪನೆಗಳು, ಮುಜುಗರ ಮತ್ತು ಮೌನವು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಬಹುದು.

ಲೈಂಗಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಪ್ರತ್ಯೇಕವಾಗಿ ನೋಡುವುದಕ್ಕಿಂತ ಒಂದೇ ಆರೋಗ್ಯದ ಎರಡು ಪ್ರಮುಖ ಭಾಗಗಳೆಂದು ಪರಿಗಣಿಸಬೇಕು. ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ ಆರೋಗ್ಯದ ನಡುವೆ ಸಮತೋಲನ ಇದ್ದಾಗ ಮಾತ್ರ ವ್ಯಕ್ತಿ ಸಂಪೂರ್ಣ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಸಮಸ್ಯೆ ಕಂಡುಬಂದರೆ ಮುಜುಗರ ಪಡದೆ ಅರ್ಹ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಅತ್ಯುತ್ತಮ ಮಾರ್ಗವಾಗಿದೆ.