ಟ್ರಂಪ್ ಹೆಲಿಕಾಪ್ಟರ್‌ ಮತ್ತು ಪ್ರಯಾಣಿಕ ವಿಮಾನ ಅಪಾಯಕಾರಿ ಹಾರಾಟ, ಕೂದಲೆಳೆ ಅಂತರದಿಂದ ಪಾರಾಯ್ತು ಟ್ರಂಪ್ ಇದ್ದ ಹೆಲಿಕಾಪ್ಟರ್! ತಪ್ಪಿದ ದೊಡ್ಡ ದುರಂತ!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ Donald Trump ಪ್ರಯಾಣಿಸುತ್ತಿದ್ದ ಮೆರೈನ್ ಒನ್ ಹೆಲಿಕಾಪ್ಟರ್ ಮತ್ತು ವಾಣಿಜ್ಯ ಪ್ರಯಾಣಿಕ ವಿಮಾನದ ನಡುವೆ ಅಪಾಯಕಾರಿ ಸಮೀಪದ ಹಾರಾಟ (near miss) ಸಂಭವಿಸಿದ್ದು, ಅಮೆರಿಕದ ವಾಯು ಸುರಕ್ಷತಾ ವ್ಯವಸ್ಥೆ ಕುರಿತು ಮತ್ತೆ ಆತಂಕ ಮೂಡಿಸಿದೆ.

ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ಮಂಗಳವಾರ ಮೆರೈನ್ ಒನ್ ಹೆಲಿಕಾಪ್ಟರ್ ಮತ್ತು ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಾಣಿಜ್ಯ ಜೆಟ್ ನಡುವೆ ನಿಗದಿತ ಕನಿಷ್ಠ ಸುರಕ್ಷತಾ ಅಂತರ ಕಾಯ್ದುಕೊಳ್ಳಲಾಗಿಲ್ಲ. ಆದರೆ, ಎರಡೂ ವಿಮಾನಗಳು ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನ ತಲುಪಿದ್ದು, ಅಧ್ಯಕ್ಷ ಟ್ರಂಪ್ ಸೇರಿದಂತೆ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಎಫ್‌ಎಎ ಸ್ಪಷ್ಟಪಡಿಸಿದೆ.

2025ರ ದುರಂತದ ಬಳಿಕವೂ ಮರುಕಳಿಸಿದ ಆತಂಕ

ಈ ಘಟನೆ ಮತ್ತಷ್ಟು ಕಳವಳಕ್ಕೆ ಕಾರಣವಾಗಿರುವುದು, ಇದೇ ಪ್ರದೇಶದಲ್ಲಿ 2025ರ ಜನವರಿಯಲ್ಲಿ ಮಿಲಿಟರಿ ಹೆಲಿಕಾಪ್ಟರ್ ಮತ್ತು ವಾಣಿಜ್ಯ ವಿಮಾನ ಡಿಕ್ಕಿ ಹೊಡೆದು 67 ಮಂದಿ ಮೃತಪಟ್ಟಿದ್ದ ದುರಂತದ ನೆನಪು ಇನ್ನೂ ಹಸಿರಾಗಿರುವ ಹಿನ್ನೆಲೆಯಲ್ಲಿ. ಆ ಅಪಘಾತದ ಬಳಿಕ ಎಫ್‌ಎಎ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿ, ರೇಗನ್ ವಿಮಾನ ನಿಲ್ದಾಣದ ಸುತ್ತ ಹೆಲಿಕಾಪ್ಟರ್ ಮತ್ತು ಪ್ರಯಾಣಿಕ ವಿಮಾನಗಳ ಏಕಕಾಲದ ಕಾರ್ಯಾಚರಣೆಗೆ ನಿರ್ಬಂಧ ಹೇರಿತ್ತು.

ಸುರಕ್ಷತಾ ನಿಯಮ ಉಲ್ಲಂಘನೆಯೇ?

ಎಫ್‌ಎಎ ನಿಯಮಗಳ ಪ್ರಕಾರ, ವಿಮಾನ ನಿಲ್ದಾಣದ ಸಮೀಪ ಹಾರುವ ಎರಡು ವಿಮಾನಗಳ ನಡುವೆ ಕನಿಷ್ಠ 1.5 ಮೈಲಿ (2.4 ಕಿ.ಮೀ.) ಅಂತರ ಹಾಗೂ 500 ಅಡಿ ಎತ್ತರದ ವ್ಯತ್ಯಾಸ ಇರಬೇಕು. ಆದರೆ, ಈ ಘಟನೆಯಲ್ಲಿ ಆ ಸುರಕ್ಷತಾ ಮಾನದಂಡ ಪಾಲನೆಯಾಗಿಲ್ಲ ಎನ್ನಲಾಗಿದೆ. ಇದರಿಂದ ಅಧ್ಯಕ್ಷರ ಭದ್ರತೆ ಹಾಗೂ ವಾಯು ಸಂಚಾರ ನಿರ್ವಹಣೆಯ ಕಾರ್ಯವಿಧಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ವಾಣಿಜ್ಯ ವಿಮಾನಗಳನ್ನು ಏಕೆ ತಡೆದಿಲ್ಲ?

ಮಾಧ್ಯಮ ವರದಿಗಳ ಪ್ರಕಾರ, ಟ್ರಂಪ್ ಅವರ ಮೆರೈನ್ ಒನ್ ಹೆಲಿಕಾಪ್ಟರ್ ಮಧ್ಯಾಹ್ನ ಸುಮಾರು 2:33ಕ್ಕೆ ಶ್ವೇತಭವನದಿಂದ ಹೊರಟಿತ್ತು. ಸಾಮಾನ್ಯವಾಗಿ ಅಧ್ಯಕ್ಷರ ಹೆಲಿಕಾಪ್ಟರ್ ಹಾರಾಟಕ್ಕೂ ಮುನ್ನ ವಾಣಿಜ್ಯ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಆದರೆ, ಈ ಬಾರಿ ಆ ಕ್ರಮ ಅನುಸರಿಸದ ಕಾರಣ, ಫ್ಲೋರಿಡಾದ ಪೆನ್ಸಕೋಲಾಗೆ ತೆರಳುತ್ತಿದ್ದ ಎನ್ವಾಯ್ ಏರ್ 3742 ವಿಮಾನ ಮಧ್ಯಾಹ್ನ 2:34ಕ್ಕೆ ಟೇಕ್‌ಆಫ್ ಆಗಿದ್ದು, ಮೆರೈನ್ ಒನ್‌ಗೆ ಅಪಾಯಕಾರಿ ಸಮೀಪಕ್ಕೆ ಬಂದಿರುವುದಾಗಿ ವರದಿಯಾಗಿದೆ.

ಈ ಬೆಳವಣಿಗೆ ತಾಂತ್ರಿಕ ದೋಷಕ್ಕಿಂತ ಹೆಚ್ಚಾಗಿ ಕಾರ್ಯವಿಧಾನದಲ್ಲಿನ ಲೋಪದ ಬಗ್ಗೆ ಚರ್ಚೆಗೆ ಕಾರಣವಾಗಿದ್ದು, ಘಟನೆ ಕುರಿತು ಎಫ್‌ಎಎ ತನಿಖೆ ಮುಂದುವರಿಸಿದೆ.