ಸಾರ್ವಜನಿಕರಿಗೆ 3,000 ಔಷಧೀಯ ಸಸ್ಯಗಳ ಉಚಿತ ವಿತರಣೆ ನಡೆಸಿದ ಮುನಿಯಾಲ್ ಆಯುರ್ವೇದ ಸಂಸ್ಥೆ

ಮಣಿಪಾಲ: ಗುರುಪೂರ್ಣಿಮೆ ಹಾಗೂ ವನಮಹೋತ್ಸವದ ಅಂಗವಾಗಿ ಮುನಿಯಾಲ್ ಆಯುರ್ವೇದ ಸಂಸ್ಥೆ, ಮಣಿಪಾಲವು ಸಾರ್ವಜನಿಕರಿಗಾಗಿ ಉಚಿತ ಔಷಧೀಯ ಸಸ್ಯಗಳ ಸಸಿಗಳ ವಿತರಣಾ ಕಾರ್ಯಕ್ರಮವನ್ನು ಬುಧವಾರ ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿರುವ ಸಂಸ್ಥೆಯ ಆವರಣದಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4.00 ಗಂಟೆಯವರೆಗೆ ಆಯೋಜಿಸಿತು.

ಕಾರ್ಯಕ್ರಮವನ್ನು ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಾಂತ ಭಟ್, ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಸುಮಾರು 300 ಸಾರ್ವಜನಿಕರಿಗೆ ಒಟ್ಟು 3,000 ಔಷಧೀಯ ಸಸ್ಯಗಳ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ವಿತರಿಸಲಾದ ಸಸಿಗಳಲ್ಲಿ ಬೇವು, ಅಶೋಕ, ಬಿರಿಂದ, ನೆಲ್ಲಿ (ಆಮ್ಲ), ನೇರಳೆ, ಹಿಪ್ಪುನೇರಳೆ, ಮಾವು, ಶ್ರೀಗಂಧ, ರಕ್ತಚಂದನ, , ವಾಟೆಹುಳಿ, ಪುನರ್ಪುಳಿ, ಜಾರಿಗೆಹುಳಿ ಸೇರಿದಂತೆ ವಿವಿಧ ಔಷಧೀಯ ಸಸ್ಯಗಳ ಸಸಿಗಳು ಸೇರಿದ್ದವು.

ಸಾರ್ವಜನಿಕರಲ್ಲಿ ಔಷಧೀಯ ಸಸ್ಯಗಳ ಮನೆಮಟ್ಟದ ಬೆಳೆಗಾರಿಕೆಯನ್ನು ಉತ್ತೇಜಿಸುವುದು, ಅವುಗಳ ಆರೋಗ್ಯಪರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಜೀವವೈವಿಧ್ಯ ಸಂರಕ್ಷಣೆಗೆ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.