ಸೆಲ್ಫಿ ಹುಚ್ಚಿಗೆ ಕಾಡಾನೆಯೊಂದಿಗೆ ಫೋಟೊ ತೆಗೆಯಲು ಹೋಗಿ ಜೀವ ಕಳೆದುಕೊಂಡ ಉದ್ಯಮಿ

ಬೆಂಗಳೂರು: ಕಾಡಾನೆಯೊಂದಿಗೆ ಸೆಲ್ಫಿ ತೆಗೆಯುವ ಸಾಹಸ ಉದ್ಯಮಿಯೊಬ್ಬರ ಜೀವವನ್ನೇ ಬಲಿತೆಗೆದುಕೊಂಡಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಕನಕಪುರ ವನ್ಯಜೀವಿ ಅಭಯಾರಣ್ಯದಲ್ಲಿ ನಡೆದಿದೆ.

ಮೃತರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ, 52 ವರ್ಷದ ಉದ್ಯಮಿ ನರೇಂದ್ರ ಶಿಂಧೆ ಎಂದು ಗುರುತಿಸಲಾಗಿದೆ. ಅವರು 10 ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ತೆರಳಿದ್ದು, ವಾಪಸಾಗುವ ವೇಳೆ ಸೋಮವಾರ ಮುಂಜಾನೆ ಸುಮಾರು 1.30ರ ವೇಳೆಗೆ ಬಸವನಬೆಟ್ಟ ಸಮೀಪದ ಕರಬಗೆರೆ ಕೆರೆಯ ಬಳಿ ಈ ದುರ್ಘಟನೆ ಸಂಭವಿಸಿದೆ.

ಆರಂಭದಲ್ಲಿ ನರೇಂದ್ರ ಶಿಂಧೆ ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಇಳಿದಿದ್ದಾಗ ಕಾಡಾನೆ ದಾಳಿ ನಡೆಸಿದೆ ಎಂದು ಸ್ನೇಹಿತರು ತಿಳಿಸಿದ್ದರು. ಆದರೆ, ಅರಣ್ಯ ಇಲಾಖೆ ನಡೆಸಿದ ಸ್ಥಳ ಪರಿಶೀಲನೆ ಮತ್ತು ತನಿಖೆಯಲ್ಲಿ ಘಟನೆಗೆ ನಿಜವಾದ ಕಾರಣ ಬೆಳಕಿಗೆ ಬಂದಿದೆ.

ಅಧಿಕಾರಿಗಳ ಪ್ರಕಾರ, ಕೆರೆಯ ಸಮೀಪ ನಿಂತಿದ್ದ ಕಾಡಾನೆಯೊಂದಿಗೆ ಫೋಟೊ ಅಥವಾ ಸೆಲ್ಫಿ ತೆಗೆಯಲು ಶಿಂಧೆ ಕಾರಿನಿಂದ ಇಳಿದಿದ್ದರು. ಆನೆಯತ್ತ ಬೆನ್ನು ಮಾಡಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ದಾಳಿಯ ಪರಿಣಾಮ ಅವರು ಸಮೀಪದ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಘಟನೆ ನಡೆದ ಕೆಲವೇ ಸೆಕೆಂಡುಗಳಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಳಿಕ ಸ್ನೇಹಿತರು ಸ್ಥಳೀಯರ ನೆರವಿನಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆದು ಬೆಂಗಳೂರಿಗೆ ಕೊಂಡೊಯ್ಯಲು ಯತ್ನಿಸಿದ್ದರು. ಆದರೆ, ಅರಣ್ಯ ಸಿಬ್ಬಂದಿ ಗೇಟ್‌ನಲ್ಲಿ ವಾಹನ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ರಾಮನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ಅವರ ಪ್ರಕಾರ, ಕಾರು ನಿಲ್ಲಿಸಿದ್ದ ಸ್ಥಳದಿಂದ ಕೆರೆಯವರೆಗೆ ಸುಮಾರು 50 ಮೀಟರ್ ದೂರವಿದ್ದು, ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಆನೆ ದಾಳಿ ನಡೆಸಿದ ಕ್ಷಣದಲ್ಲಿ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಮಾಹಿತಿಯಂತೆ, ಈ ಪ್ರದೇಶದಲ್ಲಿ ಕಾಡಾನೆಯೊಂದಿಗೆ ಸೆಲ್ಫಿ ಅಥವಾ ಫೋಟೊ ತೆಗೆಯಲು ಹೋಗಿ ಮೃತಪಟ್ಟಿರುವ ಮೊದಲ ಘಟನೆ ಇದಾಗಿದೆ.

ಸಾರ್ವಜನಿಕರಿಗೆ ಅರಣ್ಯ ಇಲಾಖೆಯ ಎಚ್ಚರಿಕೆ

ಘಟನೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಕಾಡು ಪ್ರಾಣಿಗಳ ಸಮೀಪ ಹೋಗುವುದು ಅಥವಾ ಸೆಲ್ಫಿ, ಫೋಟೊ ತೆಗೆಯಲು ಪ್ರಯತ್ನಿಸುವುದು ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ಮನವಿ ಮಾಡಿದೆ. ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.