ಕೂದಲು ಉದುರುವ ಸಮಸ್ಯೆಗೆ ಸರಳ ಪರಿಹಾರ! ಮನೆಯಲ್ಲೇ ಹೀಗೆ ಮಾಡಿ ಮ್ಯಾಜಿಕ್ ಆಗತ್ತೆ

ಕೂದಲು ಉದುರುವುದು ಈಗ ಬಹಳ ಜನರಿಗೆ ಸಾಮಾನ್ಯ ಸಮಸ್ಯೆ. ಒತ್ತಡ, ಕಳಪೆ ಆಹಾರ, ಮಾಲಿನ್ಯ ಮತ್ತು ಸರಿಯಾದ ರೀತಿಯಲ್ಲಿ ಕೂದಲು ಆರೈಕೆ ಮಾಡದಿರುವುದು ಸಮಸ್ಯೆಗೆ ಕಾರಣ. ಮನೆಯಲ್ಲೇ ಇರುವ ಕೆಲವು ನೈಸರ್ಗಿಕ ವಸ್ತುಗಳನ್ನು ಕರಿಬೇವಿನೊಟ್ಟಿಗೆ ಬಳಸಿದರೆ ಕೂದಲು ಉದುರುವ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಗುತ್ತದೆ.

ಭಾರತೀಯ ಅಡುಗೆ ಮನೆಗಳಲ್ಲಿ ಕರಿಬೇವು ಇದ್ದೇ ಇರುತ್ತದೆ. ಇದು ಅಡುಗೆಗೆ ಒಳ್ಳೆಯ ವಾಸನೆ ಕೊಡುತ್ತದೆ. ಕರಿಬೇವು ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಕರಿಬೇವಿನ ಎಲೆಯಿಂದ ಕೂದಲಿನ ಆರೈಕೆ ಮಾಡಬಹುದು. ಕರಿಬೇವಿನ ಹೇರ್ ಮಾಸ್ಕ್ ಹಾಕಿದರೆ ಕೂದಲಿನ ಹಲವು ಸಮಸ್ಯೆಗಳಿಗೆ ಬ್ರೇಕ್ ಹಾಕಬಹುದು.

ಕರಿಬೇವಿನಲ್ಲಿ ವಿಟಮಿನ್ ಎ, ಬಿ, ಸಿ, ಪ್ರೋಟೀನ್, ಬೀಟಾ-ಕ್ಯಾರೋಟಿನ್, ಕಬ್ಬಿಣ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಕೂದಲಿನ ಬೇರುಗಳಿಗೆ ಪೋಷಣೆ ಕೊಟ್ಟು ಅವುಗಳನ್ನು ಬಲಪಡಿಸುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ತಲೆಹೊಟ್ಟು ನಿಯಂತ್ರಿಸುವುದರ ಜೊತೆಗೆ ಕೂದಲಿಗೆ ಹೊಳಪು ಕೊಡುತ್ತದೆ. ಬೇಗ ಬಿಳಿ ಕೂದಲು ಬರುವುದನ್ನೂ ತಡೆಯುತ್ತದೆ.

ಕರಿಬೇವಿನ ಎಲೆ ಮತ್ತು ತೆಂಗಿನೆಣ್ಣೆ: ಕೂದಲು ಚೆನ್ನಾಗಿ ಬೆಳೆಯಲು ನೆತ್ತಿ ಆರೋಗ್ಯವಾಗಿರಬೇಕು. ಅದಕ್ಕಾಗಿ ಕೂದಲಿಗೆ ನಿಯಮಿತವಾಗಿ ಎಣ್ಣೆ ಹಚ್ಚಬೇಕು. ತೆಂಗಿನೆಣ್ಣೆಗೆ ಕರಿಬೇವಿನ ಎಲೆ ಅಥವಾ ಅದರ ರಸವನ್ನು ಸೇರಿಸಿ ಕೂದಲಿಗೆ ಹಚ್ಚಬಹುದು. ಇದನ್ನು ಪ್ರತಿದಿನವೂ ಮಾಡಬಹುದು. ತೆಂಗಿನೆಣ್ಣೆಯಲ್ಲಿ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್‌ಗಳು ಹೆಚ್ಚು ಇರುತ್ತವೆ. ಅವು ಕೂದಲನ್ನು ರಕ್ಷಿಸಿ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಕೂದಲು ಉದುರುವುದನ್ನು ಕೂಡ ನಿಯಂತ್ರಿಸುತ್ತವೆ. ಈ ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ಹಚ್ಚಬಹುದು. ಅನುಕೂಲವಿದ್ದರೆ ಪ್ರತಿದಿನವೂ ಹಚ್ಚಬಹುದು.

​ಕರಿಬೇವಿನ ಎಲೆ ಮತ್ತು ಮೊಸರು: ಬಲವಾದ ಮತ್ತು ಸುಂದರವಾದ ಕೂದಲು ಬೇಕಾದರೆ, ಕರಿಬೇವು ಮತ್ತು ಮೊಸರಿನ ಪೇಸ್ಟ್ ಹಚ್ಚಿ. ಕರಿಬೇವಿನ ಎಲೆಗಳನ್ನು ರುಬ್ಬಿ ಮೊಸರಿನೊಂದಿಗೆ ಬೆರೆಸಿ. ಅದನ್ನು ತಲೆಯ ನೆತ್ತಿ ಮತ್ತು ಕೂದಲಿನ ಬೇರುಗಳಿಗೆ ಹಚ್ಚಿ. ಎರಡು ಗಂಟೆಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ. ಕೂದಲು ಆಕರ್ಷಕವಾಗುತ್ತದೆ. 

ಕರಿಬೇವಿನ ಎಲೆ ಮತ್ತು ದಾಸವಾಳದ ಹೂವು: ಕೂದಲು ಉದುರುವ ಸಮಸ್ಯೆಗೆ ಕರಿಬೇವು ಮತ್ತು ದಾಸವಾಳದ ಲೇಪನವನ್ನು ಬಳಸಬಹುದು. ಇದು ತಲೆಗೆ ತಂಪು ಅನುಭವ ನೀಡುತ್ತದೆ. ಕೂದಲಿನ ಸಮಸ್ಯೆಗಳನ್ನು ಗುಣಪಡಿಸುತ್ತದೆ ಮತ್ತು ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ. ಅರ್ಧ ಕಪ್ ಕರಿಬೇವಿನ ಎಲೆಗಳು ಮತ್ತು ಒಂದು ಹಿಡಿ ದಾಸವಾಳದ ಹೂವಿನ ದಳಗಳನ್ನು ತೆಗೆದುಕೊಳ್ಳಿ. ಎರಡನ್ನೂ ಚೆನ್ನಾಗಿ ರುಬ್ಬಿ ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನೆತ್ತಿ ಮತ್ತು ಕೂದಲಿನ ಬುಡಕ್ಕೆ ಹಚ್ಚಿ. ಒಂದು ಗಂಟೆ ಆರಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಕರಿಬೇವಿನ ಎಲೆ, ನೆಲ್ಲಿಕಾಯಿ ಮತ್ತು ಶಿಕಾಕೈ: ಕೂದಲು ಚೆನ್ನಾಗಿ ಬೆಳೆಯದಿದ್ದರೆ, ಕರಿಬೇವಿನ ಎಲೆ, ನೆಲ್ಲಿಕಾಯಿ ಮತ್ತು ಶಿಕಾಕೈಯ ಮಿಶ್ರಣವನ್ನು ಹಚ್ಚುವುದು ಒಳ್ಳೆಯದು. ಇದರಿಂದ ಕೂದಲಿನ ಸಮಸ್ಯೆ ಬೇಗನೆ ಕಡಿಮೆಯಾಗುತ್ತದೆ. 25–30 ಕರಿಬೇವಿನ ಎಲೆಗಳು ಮತ್ತು ಒಂದು ಹಿಡಿ ನೆಲ್ಲಿಕಾಯಿ ತುಂಡುಗಳನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿ. ರಾತ್ರಿ ಮಲಗುವ ಮೊದಲು ಒಂದು ಬಟ್ಟಲಿನಲ್ಲಿ ಈ ಮಿಶ್ರಣಕ್ಕೆ ಶಿಕಾಕೈ ಸೇರಿಸಿ ನೆನೆಸಿ ಬಿಡಿ. ಮರುದಿನ ಬೆಳಿಗ್ಗೆ ಈ ಮಿಶ್ರಣವನ್ನು ನೆತ್ತಿ ಮತ್ತು ಕೂದಲಿನ ಬುಡಕ್ಕೆ ಸಮವಾಗಿ ಹಚ್ಚಿ. 1–2 ಗಂಟೆಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. 

ಕರಿಬೇವಿನ ಎಲೆ ಮತ್ತು ಮೆಂತೆ: ತಲೆಯಲ್ಲಿ ಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆ ಇದ್ದರೆ ಕರಿಬೇವು ಮತ್ತು ಮೆಂತ್ಯೆಯ ಲೇಪನವನ್ನು ಹಚ್ಚಿ. ಇದರಿಂದ ತಲೆಯಲ್ಲಿ ಇರುವ ಸೋಂಕು ಮತ್ತು ಶಿಲೀಂಧ್ರ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕೂದಲು ಬೇರುಗಳಿಂದಲೇ ಪೋಷಣೆ ಪಡೆದು ದಟ್ಟವಾಗಿ ಮತ್ತು ಆಕರ್ಷಕವಾಗಿ ಕಾಣುತ್ತದೆ. ಎರಡು ಟೀ ಚಮಚ ಮೆಂತ್ಯೆ ಕಾಳನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿಡಿ. ಮುಂಜಾನೆ ಅದಕ್ಕೆ ಎರಡು ಹಿಡಿ ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿ. ದಪ್ಪ ಪೇಸ್ಟ್ ತಯಾರಿಸಿ ನೆತ್ತಿ ಮತ್ತು ಕೂದಲಿನ ಬುಡಗಳಿಗೆ ಹಚ್ಚಿ. ಒಂದು ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೆ 1-2 ಬಾರಿ ಈ ರೀತಿ ಮಾಡಿದರೆ ಸಮಸ್ಯೆಗಳು ನಿವಾರಣೆಯಾಗುತ್ತವೆ.