ನವದೆಹಲಿ: ಫುಕೆಟ್‌ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ AI2379 ವಿಮಾನವು ಮಂಗಳವಾರ ಮಧ್ಯಾಕಾಶದಲ್ಲಿ ತೀವ್ರ ಟರ್ಬುಲೆನ್ಸ್‌ಗೆ ಸಿಲುಕಿದ ಪರಿಣಾಮ ಏಕಾಏಕಿ ಸುಮಾರು 300 ಅಡಿ ಕುಸಿದಿದ್ದು, ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು 12 ಮಂದಿ ಗಾಯಗೊಂಡಿದ್ದಾರೆ. ವಿಮಾನಕ್ಕೂ ಸಣ್ಣ ಪ್ರಮಾಣದ ಹಾನಿಯಾಗಿದೆ.
ಬೆಳಿಗ್ಗೆ 8:25ಕ್ಕೆ ಫುಕೆಟ್‌ನಿಂದ ಹೊರಟಿದ್ದ ವಿಮಾನವು ನಿಗದಿಯಂತೆ ಮಧ್ಯಾಹ್ನ 11:50ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ಲಿಯರ್ ಏರ್ ಟರ್ಬುಲೆನ್ಸ್ (CAT) ಅಥವಾ ಗಾಳಿಯ ಅಪ್‌ಡ್ರಾಫ್ಟ್/ಡೌನ್‌ಡ್ರಾಫ್ಟ್‌ನಿಂದ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಟರ್ಬುಲೆನ್ಸ್ ವೇಳೆ ಕೆಲವು ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ವಿಮಾನ ಸುರಕ್ಷಿತವಾಗಿ ಇಳಿದ ತಕ್ಷಣ ಗಾಯಗೊಂಡ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಹಾಗೂ ತಪಾಸಣೆ ನಡೆಸಲಾಯಿತು.
ಘಟನೆ ಕುರಿತು ಪ್ರಕಟಣೆ ನೀಡಿರುವ ಏರ್ ಇಂಡಿಯಾ, ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ಸಂಸ್ಥೆಯ ಮೊದಲ ಆದ್ಯತೆ ಎಂದು ತಿಳಿಸಿದ್ದು, ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ಹೇಳಿದೆ.
ಈ ಟರ್ಬುಲೆನ್ಸ್ ಘಟನೆ ಕುರಿತು ಸಂಬಂಧಿತ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಘಟನೆಯ ನಿಖರ ಕಾರಣವನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.















