ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ಉಡುಪಿ : ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಉದ್ಘಾಟನೆಯನ್ನು ಪೇಜಾವರ ಮಠಾಧೀಶರಾದ  ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನೆರವೇರಿಸಿದರು. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿ,

ತುಳು ಎಂಬ ಶಬ್ದವೇ ಬಹಳಷ್ಟು ಸುಂದರವಾಗಿದೆ. ತುಂಬಿ ತುಲುಕುವ ಎಂಬ ಅರ್ಥ ತುಳುವಿಗಿದೆ. ಒಂದು ಸಮಾಜ ನಿರ್ಮಾಣ ಆಗಬೇಕಾದರೆ ಭಾಷೆ, ದೇವರು, ಪ್ರಾಂತ್ಯ ಹಾಗೂ ಸಮಾಜ ಎಂಬ ಅಂಶಗಳು ಮುಖ್ಯ. ತುಳು ಶಿವಳ್ಳಿ ಬ್ರಾಹ್ಮಣ ಸಮಾಜಕ್ಕೆ ಇದೆಲ್ಲವೂ ಇದೆ. ತುಳು ಭಾಷೆ ಲಿಪಿ ಇದೆ. ಸಾವಿರಾರು ವರ್ಷಗಳ ಹಿಂದೆ ತುಳು ಲಿಪಿಯಲ್ಲಿ ಬರೆದಿರುವ  ಗ್ರಂಥ ಇಂದಿಗೂ ಇದೆ. ತುಳು ಮಲಯಾಳಂ ಲಿಪಿಯಲ್ಲ. ಶಿವಳ್ಳಿ ಬ್ರಾಹ್ಮಣ ಸಮಾಜ ಬೇರೆಯವರಿಂದ ಪಡೆಯುವ ಸಮಾಜವಲ್ಲ, ಇನ್ನೊಬ್ಬರಿಗೆ ದಾನ ಮಾಡುವ ಸಮಾಜ. ಹಾಗಾಗಿ ಕೇರಳದವರಿಗೆ ನಮ್ಮವರೇ ತುಳು ಲಿಪಿಯನ್ನು ಧಾರೆಎರೆದಿದ್ದಾರೆ. ಈಗ ನಾವು ಅದು ನಮ್ಮ
ಲಿಪಿ ಎಂಬುವುದನ್ನೇ ಮರೆತು ಬಿಟ್ಟಿದ್ದೇವೆ. ಶಿವಳ್ಳಿ ಸಮಾಜದವರು ಕೇರಳಿಗರಿಗೆ ಕೊಡುಗೆಯಾಗಿ ಕೊಟ್ಟಿರುವ ಲಿಪಿ. ಅದು ನಮ್ಮದೇ ಲಿಪಿ. ಅದನ್ನು ನಾವು ಅಭ್ಯಾಸ ಮಾಡಬೇಕು ಎಂದರು.


ನಮ್ಮ ಸಮಾಜದ ಶಾಸಕರೇ ಬಂದಿಲ್ಲ:ಶ್ರೀಗಳ ಬೇಸರ:

ಯಾವುದೇ ಅನ್ಯ ಸಮಾಜದ ಇಂತಹ ಕಾರ್ಯಕ್ರಮ ಆಗಿದ್ದರೆ ಅಥವಾ ಯಾವುದೇ ಒಂದು ಸಂಘಟನೆಯ ಕಾರ್ಯಕ್ರಮ ಆಗಿದ್ದರೆ ಆ ಸಂಘಟನೆಯ ಹಾಗೂ ಸಮಾಜದ ರಾಜಕೀಯ ಶಾಸಕರು ತಪ್ಪದೇ ಬರುತ್ತಾರೆ. ಶಾಸಕರಿಂದ ಹಿಡಿದು ಮುಖ್ಯಮಂತ್ರಿಯವರಿಗಿನ ಜನಪ್ರತಿನಿಧಿಗಳು ಆಗಮಿಸುತ್ತಾರೆ. ಆದರೆ ನಮ್ಮ ಸಮಾಜದ ಶಾಸಕರು ಬರಲಿಲ್ಲ ಎಂದಾದರೆ ನಮ್ಮಲ್ಲಿಯೇ ಏನೂ ಒಂದು ಕೊರತೆ ಇದೆ. ಅದು ಏನೆಂಬುವುದನ್ನು ನಾವು ತೀರ್ಮಾನಿಸಬೇಕು. ಖುಷಿಯಿಂದ ಬರಬೇಕಿತ್ತು. ಆದರೆ ಅವರು ಖುಷಿಯಿಂದ ಬರಲಿಲ್ಲ. ಹಾಗಾದರೆ ನಮ್ಮ ದೌರ್ಬಲ್ಯ, ಕೊರತೆ ಏನೆಂಬುವುದನ್ನು ತಿಳಿದುಕೊಳ್ಳಬೇಕು. ನಾವು ಈ ಬಾರಿಯಂತೆಯೇ ಮುಂದಿನ ವರ್ಷ ಮತ್ತೊಂದು ಸಮ್ಮೇಳನವನ್ನು ಆಯೋಜಿಸಬೇಕು. ಅದಕ್ಕೆ ಶಾಸಕರಿಂದ ಹಿಡಿದು ಮುಖ್ಯಮಂತ್ರಿಗಳನ್ನು
ಕರೆತರಬೇಕು. ನಮ್ಮದು ಸಮಾಜ ಸಾಮಾನ್ಯ ಸಮಾಜ ಅಲ್ಲ. ನಮ್ಮದು ಚಿಕ್ಕ ಸಮಾಜ ಆಗಿರಬಹುದು. ಆದರೆ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರಂತೆ ತ್ರಿವಿಕ್ರಮ ಸಾಮರ್ಥ್ಯ ನಮ್ಮ ಸಮಾಜಕ್ಕಿದೆ. ಅದು ವಿಶ್ವವ್ಯಾಪಿಯಾಗಿದೆ ಎಂದರು.

ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿ ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಕೃಷ್ಣಮಠ, ಅಷ್ಟಮಠಗಳಲ್ಲಿ ನಮ್ಮ ಸಮಾಜದ ಪಾಲುದಾರಿಕೆ ಬಹಳ ಕಡಿಮೆ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಮ್ಮ ಮಠ, ಮಂದಿರಗಳನ್ನು ಯಾವ ರೀತಿ ಉಳಿಸಿಕೊಳ್ಳಬಹುದು ಎಂಬುವುದನ್ನು ಈಗಿನಿಂದಲೇ ಯೋಚನೆ ಮಾಡಬೇಕಾಗಿದೆ. ನಮ್ಮ ಸಮಾಜದ ಜನಸಂಖ್ಯೆಯೂ ಜಾಸ್ತಿ ಆಗಬೇಕು. ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಸಮಾಜ ವ್ಯಾಪಿಸಬೇಕು. ಆಗ ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿ ಗಟ್ಟಿಕೊಳ್ಳಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ,  ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ದೊಡ್ಡ ಶಕ್ತಿಯಾಗಿ ಬೆಳೆಯಬೇಕು. ಈ ಸಮ್ಮೇಳನದಲ್ಲಿ ಭಾಗವಹಿಸಿರುವುದಕ್ಕೆ ನನಗೆ ಬಹಳ ಸಂತೋಷ ಆಗಿದೆ. ದಕ್ಷಿಣ ಭಾರತದ ಐದು ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಒಂದಾಗಿದೆ. ಹಾಗಾಗಿ ನಮಗೆ ತುಳು ಭಾಷೆಯ ಬಗ್ಗೆ ವಿಶೇಷವಾದ ಅಭಿಮಾನ ಇರಬೇಕು. ನಾವು ನಮ್ಮ ಸ್ವಂತ ತಂದೆ ತಾಯಿಗೆ ಕೊಡುವ ಗೌರವವನ್ನು ತುಳು ಭಾಷೆಗೂ ನೀಡಬೇಕು. ತುಳು ಭಾಷೆ ಹೆತ್ತ ತಾಯಿ ಇದ್ದಂತೆ. ಅದರ ಮೇಲೆ ನಮಗೆ ವಿಶೇಷವಾದ ಪ್ರೀತಿ, ಪ್ರೇಮ ಇರಬೇಕು. ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ಸಂಕುಚಿತ ಸಂಘಟನೆ ಎಂಬ ಭಾವನೆ ಕೆಲವರಲ್ಲಿದೆ. ಒಂದು ದೇವಸ್ಥಾನಕ್ಕೆ ಗರ್ಭಗುಡಿ, ಕುಂಭ ಪ್ರತಿಷ್ಠೆ ಹಾಗೂ ಅದರ ಮೇಲೊಂದು ದೊಡ್ಡ ಪ್ರತಿಷ್ಠೆ ಇದ್ದಂತೆ. ಹಿಂದೂ ಸಮಾಜದಲ್ಲಿ ಬ್ರಾಹ್ಮಣ ಸಮುದಾಯ, ಅದರೊಳಗೆ ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ಬೆರೆತುಕೊಂಡಿದೆ ಎಂದರು.

ಕೃಷ್ಣಾಪುರ ಮಠಾಧೀಶರಾದ  ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,  ಸುಬ್ರಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು,  ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ  ಸಮ್ಮೇಳನದ ಅಧ್ಯಕ್ಷರಾದ ಶ್ರೀ ರಾಮದಾಸ ಮಡಮಣ್ಣಾಯ, ಡಾ.ಬಾಲಕೃಷ್ಣ ಮೂಡಂಬಡಿತ್ತಾಯ, ಪ್ರಧಾನ ಸಂಚಾಲಕರಾದ ಎಂ.ಬಿ.ಪುರಾಣಿಕ್, ಕಾರ್ಯಾಧ್ಯಕ್ಷರಾದ ಮಂಜುನಾಥ ಉಪಾಧ್ಯಾಯ, ಶ್ರೀ ಹರಿಕೃಷ್ಣ ಪುನರೂರು ,ಕೇರಳದ ವೆಂಕಟರಮಣ ಪೋತಿ, ಶ್ರೀ ರಾಮದಾಸ್ ಭಟ್ ಉಡುಪಿ, ಗೋವಾದ ಡಾ.ಗೋಪಾಲ ಮುಗೆರಾಯ ಉಪಸ್ಥಿತರಿದ್ದರು.