ಉಡುಪಿ: ಮಣಿಪಾಲದ ರಾಷ್ಟ್ರೀಯ ಹೆದ್ದಾರಿ 169(ಎ)ರ ರಸ್ತೆ ಬದಿಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಿದ್ದರಿಂದ ಶುಕ್ರವಾರ ಸಂಜೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದರು.
ಮಣಿಪಾಲದ ಗ್ರೀನ್ ಪಾರ್ಕ್ನಿಂದ ಸಿಂಡಿಕೇಟ್ ಸರ್ಕಲ್ವರೆಗೆ ವಾಹನಗಳ ಸಾಲು ಹಲವು ಕಿಲೋಮೀಟರ್ಗಳಷ್ಟು ವಿಸ್ತರಿಸಿತ್ತು. ಕಚೇರಿ ಅವಧಿ ಮುಗಿಸಿ ಮನೆಗೆ ತೆರಳುತ್ತಿದ್ದ ನೌಕರರು ಹಾಗೂ ಸಾರ್ವಜನಿಕರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು.
ಟ್ರಾಫಿಕ್ ಜಾಮ್ನ ಮಧ್ಯೆ ಆ್ಯಂಬುಲೆನ್ಸ್ ಕೂಡ ಸಿಲುಕಿಕೊಂಡಿದ್ದು, ರೋಗಿಯನ್ನು ಆಸ್ಪತ್ರೆಗೆ ತಲುಪಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸೈರನ್ ಮೊಳಗಿಸಿದರೂ ವಾಹನಗಳಿಗೆ ದಾರಿ ಬಿಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.
ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದರು.















