ಉತ್ತರಕನ್ನಡ ಜಿಲ್ಲೆ: ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀಧರ್ ಭಟ್ ಕಾಸರಕೋಡು ಅವರು ಶುಕ್ರವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡಿನವರು. ಇವರು ಬಡಗುತಿಟ್ಟಿನ ಅಗ್ರಗಣ್ಯ ಹಾಸ್ಯ ಕಲಾವಿದರಲ್ಲಿ ಒಬ್ಬರಾಗಿದ್ದರು. ಇವರ ಹಾಸ್ಯಕ್ಕೆ ಭಾರೀ ಬೇಡಿಕೆಯೂ ಇತ್ತು. ಹಾಸ್ಯದಲ್ಲಿ ಸೂಕ್ಷ್ಮತೆ ಮತ್ತು ಗಂಭೀರತೆ ಬೆರೆಸುವಲ್ಲಿ ಇವರಿಗೆ ವಿಶೇಷ ಪರಿಣತಿ ಇತ್ತು.

ಇತ್ತೀಚೆಗೆ ಪ್ರತಿಷ್ಟಿತ ಮೇಳದಲ್ಲಿ ಅತಿಥಿ ಕಲಾವಿದರಾಗಿ ಯಕ್ಷಾಭಿಮಾನಿಗಳನ್ನು ರಂಜಿಸುತ್ತಿದ್ದರು. ಅಜ್ಜಿ, ಸೂತ್ರಧಾರಿ, ಮಾಣಿ, ದಾರುಕ, ಮಂತ್ರಿ, ಸೇವಕ,ವ್ಯಾಪಾರಿ ಹೀಗೆ ನಾನಾ ಪಾತ್ರಗಳಲ್ಲಿ ಮಿಂಚಿದ್ದರು. ಸಹಜ ಹಾಸ್ಯ ಮಾಡುವ ಜೊತೆಗೆ ವಿಶೇಷ ತಾಳ್ಮೆ, ಪ್ರೇಕ್ಷಕರೊಂದಿಗೆ ಒಳ್ಳೆಯ ಒಡನಾಟ ಇವರಿಗಿತ್ತು.
ಇಂದು ಬೈಂದೂರಿನಲ್ಲಿ ಇವರು ಹಾಸ್ಯ ಕಲಾವಿದರಾಗಿ ನಟಿಸಬೇಕಿದ್ದ ಯಕ್ಷಗಾನ ಪ್ರಸಂಗವೊಂದು ಏರ್ಪಾಡಾಗಿತ್ತು.ಅಲ್ಲಿ ಪ್ರೇಕ್ಷಕರನ್ನು ನಗಿಸುವ ಮೊದಲೇ ಯಕ್ಷಾಭಿಮಾನಿಗಳನ್ನು ಅಳಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಮಣಿಪಾಲದಂತಹ ಆಸ್ಪತ್ರೆ ಇದ್ದರೆ ಹಾಸ್ಯಗಾರರ ಜೀವ ಉಳಿಯುತ್ತಿತ್ತೇನೋ!
ಶ್ರೀಧರ ಭಟ್ ಕಾಸರಕೋಡು ಅವರು ಕೆಲವು ಸಮಯದಿಂದ ಹಿಂದೆ ಕುಸಿಬಿದ್ದಿದ್ದರಂತೆ, ಶುಕ್ರವಾರವೂ ಆರೋಗ್ಯ ಸಮಸ್ಯೆಯಾದಾಗ ಅವರನ್ನು ಮಣಿಪಾಲಕ್ಕೆ ಕರೆದುಕೊಂಡು ಹೋಗಲಾಯಿತು. ಆದರೆ ದಾರಿಮಧ್ಯೆಯೇ ಅವರು ಸಾನ್ನಪ್ಪಿದ್ದಾರೆ ಎನ್ನಲಾಗಿದೆ. ಉತ್ತರ ಕನ್ನಡದಲ್ಲಿ ಮಣಿಪಾಲದಂತಹ ಸವಲತ್ತುಗಳಿರುವ ಆಸ್ಪತ್ರೆ ನಿರ್ಮಿಸಬೇಕು ಎನ್ನುವುದು ಎಷ್ಟೋ ಕಾಲದಿಂದ ಅಲ್ಲಿನ ಜನರ ಬೇಡಿಕೆಯಾಗಿದೆ.ಆದರೆ ಯಾವ ಸರಕಾರವೂ ಜನರ ಬೇಡಿಕೆಗೆ ಒತ್ತುಕೊಟ್ಟಿಲ್ಲ.ಇದರಿಂದ ಉತ್ತರಕನ್ನಡದ ಜನ ಜೀವ ಉಳಿಸಿಕೊಳ್ಳಲಿಕ್ಕಾಗಿ ದೂರದ ಮಣಿಪಾಲಕ್ಕೆ ಬರುವ ಸ್ಥಿತಿಯಿದೆ! ಉತ್ತರ ಕನ್ನಡದಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಕ್ಕಿದ್ದರೆ ಖಂಡಿತವಾಗಿಯೂ ಶ್ರೀಧರ ಭಟ್ರ ಜೀವ ಉಳಿಯುತ್ತಿತ್ತೇನೋ!ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದು ನಿಜವೂ ಹೌದು















