ಉಡುಪಿ: ರಾಹುಲ್ ಗಾಂಧಿ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುರುವಾರ ರಾತ್ರಿ ಉಡುಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆಗೆ ಒಳಗಾದರು.ಮಂಗಳವಾರ ಉಡುಪಿ ನಗರದಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ನೀಡಿದ್ದ ಭಾಷಣದ ಕುರಿತು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಸಂಬಂಧ ಬುಧವಾರ ಪೊಲೀಸರು ಶಾಸಕರ ನಿವಾಸಕ್ಕೆ ತೆರಳಿ ನೋಟಿಸ್ ಜಾರಿಗೊಳಿಸಿದ್ದರು. ಅದರಂತೆ ಗುರುವಾರ ರಾತ್ರಿ ಸುಮಾರು 8.25ಕ್ಕೆ ನಗರ ಠಾಣೆಗೆ ಆಗಮಿಸಿದ ಶಾಸಕ ಯಶ್ ಪಾಲ್ ಸುವರ್ಣ ಅವರನ್ನು ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 72 ಪ್ರಶ್ನೆಗಳನ್ನು ಕೇಳಿದ್ದು, ಶಾಸಕರು ಆ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ ಸುಮಾರು 9.30ರ ವೇಳೆಗೆ ಅವರು ಪೊಲೀಸ್ ಠಾಣೆಯಿಂದ ನಿರ್ಗಮಿಸಿದರು.















