ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ ಮುದ್ರಾಧಾರಣೆ ಭಕ್ತಿ ಶ್ರದ್ಧೆಯಿಂದ ನೆರವೇರಿತು.
ಶ್ರೀ ಕಾಣಿಯೂರು ಮಠ ಹಾಗೂ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ತಪ್ತ ಮುದ್ರಾಧಾರಣೆ ಸ್ವೀಕರಿಸಿದರು.
ಉಡುಪಿ ನಗರದ ಶ್ರೀ ಕಾಣಿಯೂರು ಮಠದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ತಪ್ತ ಮುದ್ರಾಧಾರಣೆಯು ವೈದಿಕ ಸಂಪ್ರದಾಯದಂತೆ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಸುದರ್ಶನ ಹೋಮ, ವಿಶೇಷ ಪೂಜೆ, ಆರತಿ ಹಾಗೂ ಪೂರ್ಣಾಹುತಿ ವಿಧಿವಿಧಾನಗಳನ್ನು ನಡೆಸಲಾಯಿತು. ಬಳಿಕ ಕಾಣಿಯೂರು ಮಠದ ಪೀಠಾಧಿಪತಿ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿದರು.
ಇದೇ ವೇಳೆ ಉಡುಪಿ ಶ್ರೀಕೃಷ್ಣ ಮಠದಲ್ಲಿಯೂ ಪ್ರಥಮ ಏಕಾದಶಿ ಅಂಗವಾಗಿ ತಪ್ತ ಮುದ್ರಾಧಾರಣೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿದರು.
ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಶ್ರೀಕೃಷ್ಣ ಮಠಕ್ಕೆ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಪ್ತ ಮುದ್ರಾಧಾರಣೆ ಸ್ವೀಕರಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾದರು















