ಮುಂಬಯಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಖ್ಯಾತ ತಮಿಳು ನಟಿ ಜ್ಯೋತಿಕಾ ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜ್ಯೋತಿಕಾ, ಧರ್ಮೇಂದ್ರ ಪ್ರಧಾನ್ ಅವರನ್ನು ಉದ್ದೇಶಿಸಿ, “ಧರ್ಮೇಂದ್ರ ಪ್ರಧಾನ್ ಅವರೇ, ಹುದ್ದೆಯಿಂದ ಕೆಳಗಿಳಿಯಿರಿ. ರಾಜೀನಾಮೆ ನೀಡಿ” ಎಂದು ನೇರವಾಗಿ ಒತ್ತಾಯಿಸಿದ್ದಾರೆ. ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇನ್ನೂ ತಮ್ಮ ಪೋಸ್ಟ್‌ನಲ್ಲಿ, “ನಾನು ವಿದ್ಯಾರ್ಥಿಗಳು ಮತ್ತು ನಮ್ಮ ದೇಶದ ಭವಿಷ್ಯದ ಪರವಾಗಿದ್ದೇನೆ. ನಾನು ಹೊಣೆಗಾರಿಕೆಯ ಪರವಾಗಿದ್ದೇನೆ. ನಾನು ಪ್ರಜಾಪ್ರಭುತ್ವ ಭಾರತದ ಪರವಾಗಿದ್ದೇನೆ. ನಾನು ಸುಧಾರಿತ ಶಿಕ್ಷಣ ವ್ಯವಸ್ಥೆಯ ಪರವಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ನಟಿ ಜ್ಯೋತಿಕಾ ಅವರ ಈ ಹೇಳಿಕೆ ನೀಟ್ ಪರೀಕ್ಷೆ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತು ದೇಶಾದ್ಯಂತ ನಡೆಯುತ್ತಿರುವ ಚರ್ಚೆಗೆ ಮತ್ತಷ್ಟು ವೇದಿಕೆ ಕಲ್ಪಿಸಿದೆ.















