ಮಧ್ಯಪ್ರಾಚ್ಯ ದೇಶಗಳಲ್ಲಿ ಮುಂದುವರಿದಿರುವ ಯುದ್ಧದ ಕಾರಣದಿಂದಾಗಿ ರಾಜ್ಯದ ಮಧ್ಯಮ ವರ್ಗದ ಅಡುಗೆ ಮನೆಗೆ ದೊಡ್ಡ ಹೊಡೆತ ಬಿದ್ದಿದೆ. ಕಚ್ಚಾ ವಸ್ತು ಹಾಗೂ ಇಂಧನ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಕಳೆದ 4 ತಿಂಗಳಿಂದ ರಾಜ್ಯಾದ್ಯಂತ ಸಲ್ಲಿಕೆಯಾಗಿರುವ 90,000ಕ್ಕೂ ಅಧಿಕ LPG ಸಂಪರ್ಕ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಸಿಲಿಂಡರ್ ಕೊರತೆಯಿಂದಾಗಿ 100ಕ್ಕೂ ಹೆಚ್ಚು ಏಜೆನ್ಸಿಗಳು ಬಂದ್ ಆಗಿದ್ದರೆ, 3,000ಕ್ಕೂ ಹೆಚ್ಚು ಏಜೆನ್ಸಿಗಳು ಹೊಸ ಗ್ಯಾಸ್ ಸಂಪರ್ಕ ನೀಡದೆ ಕೇವಲ ವಾಣಿಜ್ಯ ಸಿಲಿಂಡರ್‌ಗಳಿಗೆ ಆದ್ಯತೆ ನೀಡುತ್ತಿವೆ. ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ
- ರಾಜ್ಯದ ಅಡುಗೆ ಮನೆಗಳ ಗ್ಯಾಸ್ ಸಂಪರ್ಕದ ಮೇಲೆ ಮಧ್ಯಪ್ರಾಚ್ಯದ ಯುದ್ಧದ ಕರಿನೆರಳು
- ಕಳೆದ 4 ತಿಂಗಳಿಂದ ಹೊಸ ಅನಿಲ ಸಂಪರ್ಕ ಸ್ಥಗಿತದಿಂದ 90,000 ಗ್ರಾಹಕರು ಕಂಗಾಲು
- ರಾಜ್ಯದಲ್ಲಿ ಅನಿಲ ಸಂಪರ್ಕ ಕೊರತೆ ನೆಪ ಹೇಳಿ 100ಕ್ಕೂ ಹೆಚ್ಚು ಏಜೆನ್ಸಿಗಳು ಬಂದ್, ಬಹುತೇಕ ಕಡೆ ಲಾಭದಾಯಕ ಕಮರ್ಷಿಯಲ್ ಸಿಲಿಂಡರ್ ಪೂರೈಕೆಗೆ ಆದ್ಯತೆ
ಮಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ಮುಂದುವರಿದಿರುವ ಸಮರ ಪರೋಕ್ಷವಾಗಿ ರಾಜ್ಯದ ಮಧ್ಯಮ ವರ್ಗದ ಶ್ರೀ ಸಾಮಾನ್ಯರ ಅಡುಗೆ ಮನೆಗೆ ದೊಡ್ಡ ಏಟು ನೀಡಿದೆ. ಕಳೆದ ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಹೊಸ ಅಡುಗೆ ಅನಿಲ ಸಂಪರ್ಕಕ್ಕಾಗಿ ಸಲ್ಲಿಸಲಾದ 90 ಸಾವಿರಕ್ಕೂ ಅಧಿಕ ಅರ್ಜಿಗಳು ದೂಳು ಹಿಡಿಯುತ್ತಿದ್ದು, ಜನಸಾಮಾನ್ಯರು ಗ್ಯಾಸ್ ಸಂಪರ್ಕ ಸಿಗದೆ ಪರದಾಡುವಂತಾಗಿದೆ. ಕೊಲ್ಲಿ ಬಿಕ್ಕಟ್ಟಿನಿಂದಾಗಿ ನೆಪ ಮಾಡಿಕೊಂಡಿರುವ ಗ್ಯಾಸ್ ಏಜೆನ್ಸಿಗಳು, ಹೊಸ ಅರ್ಜಿಗಳನ್ನು ಸ್ವೀಕರಿಸಿ ಬದಿಗಿಡುತ್ತಿವೆ. ಕಳೆದ 4 ತಿಂಗಳಲ್ಲಿ ರಾಜ್ಯದಲ್ಲಿ 100ಕ್ಕೂ ಅಧಿಕ ಗ್ಯಾಸ್ ಏಜೆನ್ಸಿಗಳ ಬಾಗಿಲಿಗೆ ಬೀಗ ಹಾಕಲಾಗಿದ್ದು, 3,000ಕ್ಕೂ ಹೆಚ್ಚು ಏಜೆನ್ಸಿಗಳು ಹೊಸ ಸಂಪರ್ಕ ಕೊಡುವುದನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದು, ಕೇವಲ ಲಾಭದಾಯಕ ‘ಕಮರ್ಷಿಯಲ್ ಸಿಲಿಂಡರ್’ ಪೂರೈಕೆಗೆ ಆದ್ಯತೆ ನೀಡುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾರ್ಚ್ ಮಧ್ಯಭಾಗದಿಂದ ಅಡುಗೆ ಅನಿಲ ಪೂರೈಕೆ ಕಂಗೆಟ್ಟಿದ್ದು, ಮೈಸೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪರಿಸ್ಥಿತಿ ಗಂಭೀರವಾಗಿದೆ.
ಕನೆಕ್ಷನ್ ನಿರಾಕರಣೆಗೆ ನೆವಗಳು !
- ಹೊಸ ಕನೆಕ್ಷನ್‌ಗೆ ಪೂರಕ ದಾಖಲೆಗಳನ್ನು ನೀಡಿದರೂ “ದಾಖಲೆ ಸರಿಯಿಲ್ಲ/ಪೂರಕವಾಗಿಲ್ಲ’ ಎಂದು ನಕಾರಾತ್ಮಕ ಉತ್ತರ ನೀಡುವುದು
- ಸಿಲಿಂಡರ್ ಕೊರತೆ ಹಾಗೂ ಅಸ್ಥಿರ ಪೂರೈಕೆಯ ಕಾರಣ ನೀಡಿ ರಾಜ್ಯದಲ್ಲಿ ಕಳೆದ 4 ತಿಂಗಳಲ್ಲಿ 100ಕ್ಕೂ ಅಧಿಕ ಗ್ಯಾಸ್ ಏಜೆನ್ಸಿಗಳ ಬಾಗಿಲಿಗೆ ಬೀಗ
- ಈಗಾಗಲೇ ಕೊಳವೆ ಅನಿಲ(ಪಿಎನ್‌ಜಿ) ಸಂಪರ್ಕ ವ್ಯವಸ್ಥೆ ಇರುವ ಪ್ರದೇಶಗಳಲ್ಲಿ ಹಾಗೂ ಎರಡೆರಡು ಸಂಪರ್ಕ ಹೊಂದಿರುವ ಮನೆಗಳನ್ನು ಗುರುತಿಸಿ ಕಡಿತಗೊಳಿಸುವ ಕಾರ್ಯಾಚರಣೆಯನ್ನೂ ತೈಲ ಕಂಪನಿಗಳು ಆರಂಭಿಸಿವೆ.
| ಜಿಲ್ಲೆ/ ನಗರ | ಬಾಕಿ ಇರುವ ಅರ್ಜಿ (ಅಂದಾಜು) |
| ಮೈಸೂರು | 12,000 |
| ಧಾರವಾಡ | 10,000 |
| ಬೆಳಗಾವಿ | 9,500 |
| ಕಲಬುರಗಿ | 8,000 |
| ಇತರ ಜಿಲ್ಲೆಗಳು | 50,500 |
| ಒಟ್ಟು | 90,000ಕ್ಕೂ ಅಧಿಕ |
“ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಸೂಚನೆ ಪ್ರಕಾರವೇ ಐಒಸಿ, ಬಿಪಿ ಹಾಗೂ ಎಚ್ ಪಿ ತೈಲ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಆಸ್ಪತ್ರೆಗಳು ಸೇರಿದಂತೆ ಅತ್ಯಗತ್ಯ ಸೇವೆಗಳಿಗೆ ಮಾತ್ರ ಆದ್ಯತೆಯ ಮೇಲೆ ಹೊಸ ಸಂಪರ್ಕ ನೀಡಲಾಗುತ್ತಿದೆ. ಪಿಎನ್‌ಜಿ ಸಂಪರ್ಕ ಇರುವವರಿಗೆ ಹೊಸ ಎಲ್ ಪಿಜಿ ನೀಡುವುದಿಲ್ಲ.””ಕಳೆದ ನಾಲ್ಕು ತಿಂಗಳಿಂದ 400ಕ್ಕೂ ಹೆಚ್ಚು ಗ್ರಾಹಕರು ಹೊಸ ಕನೆಕ್ಷನ್‌ಗೆ ಅರ್ಜಿ ನೀಡಿದ್ದಾರೆ. ತೈಲ ಕಂಪನಿ ಗಳಿಂದ ಹೆಚ್ಚುವರಿ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಹೊಸ ಸಿಲಿಂಡರ್‌ಗಳ ಸ್ಟಾಕ್ ಇಲ್ಲದೆ ಹೊಸ ಸಂಪರ್ಕ ನೀಡಲು ಹೇಗೆ ತಾನೆ ಸಾಧ್ಯ?”
ಹೊಸ ಗ್ಯಾಸ್ ಕನೆಕ್ಷನ್ ನೀಡುವ ವಿಚಾರದಲ್ಲಿ ಏಜೆನ್ಸಿಗಳ ಜೊತೆ ಪ್ರಾಥಮಿಕ ಮಾತುಕತೆ ನಡೆಸಲಾಗುತ್ತದೆ. ತದನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು.”















