ಕುಂದಾಪುರ : ಇಲ್ಲಿಗೆ ಸಮೀಪದ ತೆಕ್ಕಟ್ಟೆಯ ಮಾಲಾಡಿ ಎಂಬಲ್ಲಿನ ಖಾಸಗಿ ಮಾವಿನ ತೋಟದಲ್ಲಿ ಗುರುವಾರ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ಭಾರಿ ಗಾತ್ರದ ಹೆಣ್ಣು ಚಿರತೆಯನ್ನು ಬೋನಿನಲ್ಲಿ ಸೆರೆ ಹಿಡಿದಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಪರಿಸರದಲ್ಲಿ ಚಿರತೆ ಕಾಣಿಸುತ್ತಿದೆ ಎನ್ನುವ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಬೋನನ್ನು ಇರಿಸಿ ಅದರಲ್ಲಿ ನಾಯಿಯನ್ನು ಕಟ್ಟಿ ಹಾಕಿ ಚಿರತೆಯನ್ನು ಬೋನಿನಲ್ಲಿ ಬಂಧಿಸುವ ಕಾರ್ಯತಂತ್ರ ರೂಪಿಸಿದ್ದರು.
ಸ್ಥಳೀಯರ ಸಹಕಾರದಿಂದ ನಡೆಯುತ್ತಿದ್ದ ಆಪರೇಶನ್ ಚಿತಾ ಕಾರ್ಯಚರಣೆ ಬುಧವಾರ ತಡ ರಾತ್ರಿ ಯಶಸ್ವಿಯಾಗಿತ್ತು. ಗುರುವಾರ ಬೆಳಿಗ್ಗೆ ಬೋನಿನಲ್ಲಿ ಚಿರತೆ ಬಂಧಿಯಾಗಿರುವ ಮಾಹಿತಿಯನ್ನು ಸ್ಥಳೀಯರಿಂದ ಪಡೆದುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಚಿರತೆಯನ್ನು ರಕ್ಷಿತಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ಮಾತಿನ ಚಕಮಕಿ:
ಚಿರತೆಯನ್ನು ಸ್ಥಳಾಂತರಿಸುವ ಕಾರ್ಯಚರಣೆ ನಡೆಯುವ ವೇಳೆಯಲ್ಲಿ ಸ್ಥಳೀಯರಿಗೂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಚಿರತೆ ಬಂಧನಕ್ಕೆ ಒಳಗಾದ ಬೋನಿನ ಬಳಿ ತೆರಳದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರಿಗೆ ಸೂಚಿಸಿದಾಗ ಕೋಪಗೊಂಡ ಸ್ಥಳೀಯ ಯುವಕರು, ಚಿರತೆಯನ್ನು ಬಂಧಿಸುವರೆಗೆ ನಾವು ಬೇಕಾಗಿತ್ತು. ಈಗ ಬೇಡ ಎನ್ನುತ್ತಿದ್ದಾರೆ ನಾವ್ಯಾರು ಯಾವುದಕ್ಕೂ ಬರೋದಿಲ್ಲ. ಅವರೇ ಚಿರತೆಯನ್ನು ಸಾಗಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯ್ ಭಂಡಾರಿ, ಸತೀಶ್ ದೇವಾಡಿಗ, ಸಂಜೀವ ದೇವಾಡಿಗ, ಚಿರತೆ ಹಿಡಿಯಲು ಸಹಕರಿಸಿದ ಸುರೇಶ್ ದೇವಾಡಿಗ ಹಾಗೂ ಸತೀಶ್ ದೇವಾಡಿಗ ಇದ್ದರು.
3ನೇ ಚಿರತೆ:
ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಮಾಲಾಡಿ ಪರಿಸರದಲ್ಲಿ ಅರಣ್ಯ ಇಲಾಖೆಯವರು ಸೆರೆ ಹಿಡಿದಿರುವ 3ನೇ ಚಿರತೆ ಇದಾಗಿದೆ. ಜನ ವಸತಿ ಪ್ರದೇಶದಲ್ಲಿ ಆಗಾಗ್ಗೆ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರನ್ನು ಆತಂಕಕ್ಕೆ ಒಳಪಡಿಸಿದೆ.












