ನವದೆಹಲಿ: ಗೃಹ ಬಳಕೆ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ದರ ರೂ.5.91 ಇಳಿಕೆಯಾಗಿದೆ. ಬೆಲೆ ಇಳಿಕೆಯಾಗುವ ಮೂಲಕ ಜನರಿಗೆ ಹೊಸ ವರ್ಷಕ್ಕೆ ಗಿಫ್ಟ್ ಸಿಕ್ಕಿದಂತಾಗಿದೆ. ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು 2ನೇ ಬಾರಿ ಇಳಿಕೆ ಮಾಡಿದ್ದು, ಡಿ.1 ರಂದು ರೂ.6.52 ಕಡಿತಗೊಳಿಸಿತ್ತು. ಇದರೊಂದಿಗೆ ರೂ.12.43 ಒಂದೇ ತಿಂಗಳಿನಲ್ಲಿ ಕಡಿಮೆ ಆಗಿದೆ. ಜೂನ್ ನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ತಿಂಗಳಿನಿಂದ ಸತತ 6 ಬಾರಿ ರೂ.14.13 ಹೆಚ್ಚಳವಾಗಿತ್ತು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಪಿಜಿ ಅನಿಲದ ಬೆಲೆ ಇಳಿಕೆಯಾಗಿರುವ ಕಾರಣ ಬೆಲೆಯನ್ನು ಕಡಿತಗೊಳಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿ ನೀಡಿದೆ. ಸಬ್ಸಿಡಿ ರಹಿತ ಸಿಲಿಂಡರ್ ದರದಲ್ಲಿ ಬರೋಬ್ಬರಿ ರೂ.120.50 ಕಡಿತಗೊಳಿಸಿದೆ. ಡಿ.1 ರಂದು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ರೂ.133 ಕಡಿತಗೊಳಿಸಲಾಗಿತ್ತು. ಇದರೊಂದಿಗೆ ಡಿಸೆಂಬರ್ ತಿಂಗಳಿನಲ್ಲಿ ರೂ.253.50 ದರ ಕಡಿತವಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಪರಿಷೃತ ದರ ಜಾರಿ ಬರಲಿದ್ದು, ದೆಹಲಿಯಲ್ಲಿ ರೂ.500.90 ಇದ್ದ 14.2 ಕೆಜಿ ಸಬ್ಸಿಡಿ ಸಿಲಿಂಡರ್ ಬೆಲೆ ದರ ಕಡಿತದಿಂದ ರೂ.494.99 ಆಗಲಿದೆ.