ಕೋಟೇಶ್ವರ ಕೋಡಿ ಹಬ್ಬ ಗಮ್ಮತ್ತೋ ಗಮ್ಮತ್ತ್: ವೈಭವದ ರಥೋತ್ಸವದಲ್ಲಿ ಮಿಂದೆದ್ದ ಊರು

ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಕುಂದಾಪುರ: ಕರ್ನಾಟಕ ಕರಾವಳಿಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಇಲ್ಲಿನ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬ ವಿಜೃಂಭಣೆಯಿಂದ ಜರುಗಿತು. ಗುರುವಾರ ನಡೆದ
ವೈಭವದ ಬ್ರಹ್ಮ ರಥೋತ್ಸವಕ್ಕೆ ಊರ ಹಾಗೂ ಪರವೂರಿನಿಂದ ಬಂದ ಸಾವಿರಾರು ಮಂದಿ ಸಾಕ್ಷಿಯಾದರು.

ಈ ಬಾರಿಯ ಕೊಡಿ ಹಬ್ಬಕ್ಕಾಗಿ ಗುರುವಾರ ನಸುಕಿನಿಂದಲೆ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗಿದ್ದ ಭಕ್ತರು ಮಧ್ಯಾಹ್ನ ೧೨.೪೦ ಕ್ಕೆ ನಡೆದ ವೈಭವದ ರಥೋತ್ಸವದ ಆರೋಹಣವನ್ನು ನೋಡಿ ಕಣ್ಮನ ತುಂಬಿಕೊಂಡರು. ನಸುಕಿನಲ್ಲಿ ಇತಿಹಾಸ ಪ್ರಸಿದ್ದ ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬಂದ ಭಕ್ತರು, ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ ದೇವರ ದರ್ಶನ ಪಡೆದು ಸಂಪ್ರದಾಯಬದ್ದ ಪೂಜೆ ಸಲ್ಲಿಸಿದ್ದರು.

ಬೆಳಿಗ್ಗೆ ೧೨.೦೫ ಕ್ಕೆ ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಬಿದಿರಿನ ಕೊಡಿ, ತಾಂಡವೇಶ್ವರ ದೇವರು, ತ್ರಿಶೂಲ, ಗೋಳೆ ದೇವರು ಹಾಗೂ ಕೋಟಿಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಜಯಕಾರಗಳೊಂದಿಗೆ ಸ್ವಾಗತಿಸಲಾಯಿತು. ಬಿದಿರಿನ ಕೊಡಿಯನ್ನು ಮೊದಲು ರಥದ ಮೇಲಕ್ಕೆ ಕೊಂಡೊಯ್ಯುವ ಮೂಲಕ ರಥಾರೋಹಣಕ್ಕೆ ಚಾಲನೆ ನೀಡಲಾಯಿತು. ನಂತರ ತಾಂಡವೇಶ್ವರ ದೇವರು, ತ್ರಿಶೂಲ ಹಾಗೂ ಗೋಳೆ ದೇವರು ರಥದ ಮೇಲಕ್ಕೆ ಏರಿಸಲಾಯಿತು.

ಚಂಡೆಗಳ ತಾಳಕ್ಕೆ ತಾಂಡವ ನರ್ತನ
ದೇವರ ಮೂರ್ತಿಗಳು ರಥವನ್ನು ಏರಿದ ಬಳಿಕ ನಂದಳಿಕೆಯ ಪಿ. ರವಿರಾಜ್ ಭಟ್ ಅವರು ಕೋಟಿಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆ ಮೇಲಿರಿಸಿ ಚಂಡೆಗಳ ತಾಳಕ್ಕೆ ತಾಂಡವ ನರ್ತನ ಮಾಡಿದರು. ನಂತರ ನೆರೆದ ಭಕ್ತರು ಹರಹರ ಮಹಾದೇವ ಎನ್ನುವ ಜಯಘೋಷ ಮಾಡುತ್ತಿದ್ದಂತೆ ನರ್ತನದ ಮೂಲಕ ದೇವರೊಂದಿಗೆ ರಥದ ಮೇಲೇರಿದರು. ಉತ್ಸವ ಮೂರ್ತಿಯ ರಥಾರೋಹಣವಾದ ಬಳಿಕ ಮಂಗಳಾರತಿ, ಹಣ್ಣುಕಾಯಿ ಹಾಗೂ ರಥಕ್ಕೆ ಕಾಯಿ ಒಡೆಯುವ ಸೇವೆಗಳನ್ನು ಸಲ್ಲಿಸಲಾಯಿತು. ಬಳಿಕ ರಥ ಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವ ನಡೆಯಿತು. ದೇವಸ್ಥಾನ ತಂತ್ರಿ ಪ್ರಸನ್ನ ಕುಮಾರ ಐತಾಳ್ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿಸಲಾಯಿತು.

ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಶ್ರೀ ರಾಮ ಸೇವಾ ಸಂಘದವರಿಂದ ಬ್ರಹ್ಮರಥಕ್ಕೆ ವಿಶೇಷ ಪುಷ್ಪಾಲಂಕಾರ, ದಾವಣಗೆರೆಯ ಉದ್ಯಮಿ ಕೆ.ವಿ.ಆನಂದ್ರಾವ್ಹಾಗೂ ಮಕ್ಕಳಿಂದ ಉಚಿತ ಪಾನಕ ಹಾಗೂ ಕೋಟೇಶ್ವರದ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಭಕ್ತಾಧಿಗಳಿಗೆ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ವಿ.ರಾಜೀವ್ ಶೆಟ್ಟಿ, ಶಂಕರ ಚಾತ್ರಬೆಟ್ಟು, ಅಶೋಕ ಪೂಜಾರಿ, ಭಾರತಿ ಆನಂದ ದೇವಾಡಿಗ, ಸುಶೀಲ ಶೇಟ್, ಜ್ಯೋತಿ ಎಸ್ ನಾಯ್ಕ್, ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ, ಸ್ಥಳೀಯ ಪ್ರಮುಖರಾದ ಎಂ.ಸುಧೀರ ಕುಮಾರ ಶೆಟ್ಟಿ, ದಿನೇಶ್ ಕಾಮತ್, ಕೃಷ್ಣದೇವ ಕಾರಂತ್ ಕೋಣಿ, ಕೆ.ಪ್ರೇಮಾನಂದ ಶೆಟ್ಟಿ ಕಟ್ಕೇರೆ, ಡಾ.ಸುಧಾಕರ ನಂಬಿಯಾರ್, ರಮೇಶ್ ಭಟ್‌ಕೋಟೇಶ್ವರ, ಪ್ರಭಾಕರ ಶೆಟ್ಟಿ ವಕ್ವಾಡಿ ಮೊದಲಾದವರು ಇದ್ದರು.

ಬಿಗು ಬಂದೋಬಸ್ತ್:
ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್., ಕುಂದಾಪುರ ನಗರ ಠಾಣೆ ಉಪನಿರೀಕ್ಷಕ ಹರೀಶ್ ಆರ್ ನಾಯ್ಕ್, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಾಜ್‌ಕುಮಾರ, ವಿವಿಧ ಠಾಣೆಯ ಠಾಣಾಧಿಕಾರಿಗಳಾದ ಶ್ರೀಧರ ನಾಯ್ಕ್, ನಿತ್ಯಾನಂದ, ವಾಸಪ್ಪ ನಾಯಕ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದು ಕುಂದಾಪುರ ಪ್ರಭಾರ ಡಿವೈಎಸ್ಪಿ ಟಿ ಜೈಶಂಕರ್, ಬ್ರಹ್ಮಾವರ ಸಿಪಿಐ ಸೇರಿ ನಾಲ್ವರು ಸಿಪಿಐ, ಹತ್ತು ಮಂದಿ ಪಿಎಸ್‌ಐ, ಓರ್ವ ಪ್ರೊಬೇಶನರಿ ಪಿಎಸ್‌ಐ ಸೇರಿ ೨೨೮ ಮಂದಿ ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದಾರೆ.

ಕುಡಿ ಚಿಗುರುವ ಕೊಡಿ ಹಬ್ಬ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಪ್ತಕ್ಷೇತ್ರಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಕೋಟೇಶ್ವರದ ಮಹತೋಬಾರ ಕೋಟಿಲಿಂಗೇಶ್ವರ ದೇವಸ್ಥಾನ ಹಲವಾರು ಶತಮಾನಗಳಷ್ಟು ಪುರಾತನವಾದ ದೇವಳಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ಕೊಡಿ ಹಬ್ಬದ ಉತ್ಸವದ ಹಿಂದೆ ಪರಂಪರಾನುಗತ ನಂಬಿಕೆ ಇದೆ.

ವ್ಯವಹಾರಸ್ಥರಿಗೆ ಹೊಸಲೆಕ್ಕಚಾರ ಪ್ರಾರಂಭವಾಗಿ ಅಭಿವೃದ್ಧಿಯ ಕುಡಿಯೊಡೆಯುತ್ತದೆ, ಅವಿವಾಹಿತರಿಗೆ ಬಾಳಜೋಡಿ ಸಿಗುತ್ತದೆ, ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ಜಿಲ್ಲೆಯ ಈ ಅತಿದೊಡ್ಡ ರಥೋತ್ಸವಕ್ಕೆ `ಕೊಡಿಹಬ್ಬ’ ಎಂದು ಹೆಸರು ಬರಲು ಕಾರಣವಾಯಿತು. ಒಟ್ಟಿನಲ್ಲಿ ಎಲ್ಲೆಡೆ ಸಂತಸ, ಸಮೃದ್ಧಿಯ ಕುಡಿಯೊಡೆಯುವಿಕೆಯ ನಂಬಿಕೆ ಇದೆ.

ರಾಜ್ಯದ ಪ್ರಮುಖ ಬೃಹತ್ ರಥ:
ಇನ್ನು ರಥೋತ್ಸವದ ಮೊದಲು ಮಧ್ಯಾಹ್ನದ ಸುಮಾರಿಗೆ ದೇವಳದ ಎದುರಿಗಿನ ಬ್ರಹ್ಮರಥದ ಮೇಲೆ ಗರುಡ ಪಕ್ಷಿ ಮೂರುಸುತ್ತು ಸುತ್ತುತ್ತದೆ, ಇದು ಜಾತ್ರೆಯ ಆರಂಭಕ್ಕೆ ಶುಭ ಸೂಚನೆ ಎಂಬ ನಿಟ್ಟಿನಲ್ಲಿ ರಥೋತ್ಸವ ಆರಂಭಗೊಳ್ಳುತ್ತದೆ. ಅಲ್ಲದೇ ರಾಜ್ಯದ ಪ್ರಮುಖ ದೊಡ್ದ ಗಾತ್ರದ ರಥಗಳಲ್ಲಿ ಕೋಟೇಶ್ವರದ ಈ ರಥವೂ ಒಂದು. ಈ ಬ್ರಹತ್ ಗಾತ್ರದ ಬ್ರಹ್ಮ ರಥದಲ್ಲಿ ವಿವಿಧ ಶಿಲ್ಪ ಕಲೆಯ ಕೆತ್ತನೆಗಳು ರಚಿಸಲ್ಪಟ್ಟಿದೆ.

ಸಹಸ್ರಾರು ಭಕ್ತರು:
ಹಬ್ಬದ ದಿನವಾದ ಗುರುವಾರ ಮುಂಜಾನೆ ಸೂರ್ಯ ಉದಯಕ್ಕೆ ಮುಂಚೆ ಇತಿಹಾಸ ಪ್ರಸಿದ್ದ ಕೋಟಿ ತೀರ್ಥ ಸರೋವರದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ಶುಚಿರ್ಭೂತರಾಗಿ, ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಪಡಿ ಅಕ್ಕಿ ಚೆಲ್ಲುವ ಪಾರಂಪರಿಕ `ಸುತ್ತಕ್ಕಿ ಸೇವೆ’ಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಸಂಪ್ರದಾಯಬದ್ದ ಪೂಜೆ ಸಲ್ಲಿಸಿದರು. ಕೊಡಿ ಹಬ್ಬ ಅಂದರೆ ಕುಡಿ ಅರಳಿಸುವ ಪ್ರತೀತಿ. ನವ ದಂಪತಿ ಹಬ್ಬದಲ್ಲಿ ಕಬ್ಬು ಖರೀದಿಸುವುದು ವಾಡಿಕೆ. ಜಿಲ್ಲೆಯ ನಾನಾ ಕಡೆಯ ನವ ದಂಪತಿ ಶ್ರೀಕೋಟಿಲಿಂಗೇಶ್ವರನ ದರ್ಶನ ಪಡೆದು ಕಬ್ಬು ಖರೀದಿಸುವ ದೃಶ್ಯ ಕಂಡು ಬಂತು.