ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯಗಳನ್ನು ಮುಚ್ಚಿಟ್ಟಿರುವುದು ಗಮನಕ್ಕೆ ಬಂದರೆ ಕಠಿಣ ಶಿಕ್ಷೆ, ಎಲ್ಲಾ ಶಾಲೆಗಳಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್

ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡದೆ ಮುಚ್ಚಿಡುವುದೂ ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳನ್ನು ಮುಚ್ಚಿಹಾಕುವ ಶಿಕ್ಷಣ ಸಂಸ್ಥೆಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ.

ಉಡುಪಿ ಜಿಲ್ಲೆಯ ವಸತಿ ಶಾಲೆಯ ಮುಖ್ಯೋಪಾಧ್ಯಾಯ, ಸಹ ಮುಖ್ಯೋಪಾಧ್ಯಾಯ ಹಾಗೂ ವಾರ್ಡನ್ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ತಿರಸ್ಕರಿಸಿ ಈ ಆದೇಶ ನೀಡಿದ್ದಾರೆ.

ಸಂತ್ರಸ್ತ ಬಾಲಕನ ತಂದೆ ನೀಡಿದ ದೂರಿನ ಆಧಾರದಲ್ಲಿ ಪೋಕ್ಸೊ ಕಾಯ್ದೆಯ ಸೆಕ್ಷನ್ 4, 8 ಮತ್ತು 21ರಡಿ ದಾಖಲಾದ ಪ್ರಕರಣವನ್ನು ಪ್ರಶ್ನಿಸಿ ಮೂವರು ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಈ ಹಂತದಲ್ಲಿ ದೂರಿನಲ್ಲಿರುವ ಆರೋಪಗಳನ್ನು ಸತ್ಯವೆಂದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದು ಕೇವಲ ಮಾಹಿತಿ ನೀಡದಿರುವ ಪ್ರಕರಣವಲ್ಲ, ಇನ್ನಷ್ಟು ಗಂಭೀರ ಆರೋಪಗಳನ್ನೂ ಒಳಗೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ

ದೂರಿನ ಪ್ರಕಾರ, ಜೂನ್ 2ರಂದು ಬಾಲಕನ ಸಹಪಾಠಿ ಹಾಗೂ ರೂಮ್‌ಮೇಟ್ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ವಿಷಯವನ್ನು ಬಾಲಕ ಶಾಲಾ ಆಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ, ಅದನ್ನು ಇಬ್ಬರು ವಿದ್ಯಾರ್ಥಿಗಳ ಪರಸ್ಪರ ಒಪ್ಪಿಗೆಯ ಘಟನೆಯಂತೆ ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ಬಾಲಕ ಮಕ್ಕಳ ಕಲ್ಯಾಣ ಅಧಿಕಾರಿಗೆ ಬರೆದ ಪತ್ರವನ್ನು ನಾಶಪಡಿಸಿ, “ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ” ಎಂದು ಹೊಸ ಪತ್ರ ಬರೆಯುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಾಲಾ ಆಡಳಿತವು ಈ ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡದೇ, ವಿಷಯವನ್ನು ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲಕನಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ನಂತರ ಜೂನ್ 10ರಂದು ವಸತಿ ನಿಲಯದಲ್ಲಿ ಮೊಬೈಲ್ ಅಡಗಿಸಿಟ್ಟ ಆರೋಪದಡಿ ಬಾಲಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ಇದೇ ವೇಳೆ ಬಾಲಕ ತನ್ನ ತಂದೆಗೆ ನಡೆದ ಘಟನೆಯನ್ನು ವಿವರಿಸಿದ್ದಾನೆ. ಬಳಿಕ ಬಾಲಕನ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹೈಕೋರ್ಟ್ ಮಹತ್ವದ ಅಭಿಪ್ರಾಯ

ಈ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್, ಪೋಕ್ಸೊ ಕಾಯ್ದೆಯ ಉದ್ದೇಶ ಕೇವಲ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಲ್ಲ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಶಿಕ್ಷಣ ಸಂಸ್ಥೆಗಳು ಮುಚ್ಚಿಡುವ ಪ್ರವೃತ್ತಿಯನ್ನು ತಡೆಯುವುದೂ ಆಗಿದೆ ಎಂದು ಸ್ಪಷ್ಟಪಡಿಸಿದೆ.

ಲೈಂಗಿಕ ದೌರ್ಜನ್ಯ ಆರೋಪವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಬದಲು ಅದನ್ನು ಮುಚ್ಚಿಡಲು, ಬದಲಾಯಿಸಲು ಅಥವಾ ಬೇರೆ ರೀತಿಯಲ್ಲಿ ತೋರಿಸಲು ಮಾಡುವ ಯಾವುದೇ ಪ್ರಯತ್ನ ಅಪರಾಧಿಗಳಿಗೆ ಮತ್ತಷ್ಟು ಧೈರ್ಯ ತುಂಬುತ್ತದೆ. ಜೊತೆಗೆ ಸಂತ್ರಸ್ತ ಮಗುವಿನ ಮಾನಸಿಕ ನೋವನ್ನು ಹೆಚ್ಚಿಸಿ, ಪೋಕ್ಸೊ ಕಾಯ್ದೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಕ್ಕಳನ್ನು ಶಿಕ್ಷಣ ಸಂಸ್ಥೆಗಳ ಆರೈಕೆಗೆ ಒಪ್ಪಿಸುವ ಪೋಷಕರ ವಿಶ್ವಾಸವನ್ನು ಕಾಪಾಡುವುದು ಶಾಲೆಗಳ ಜವಾಬ್ದಾರಿಯಾಗಿದ್ದು, ಇಂತಹ ಪ್ರಕರಣಗಳನ್ನು ಮುಚ್ಚಿಡುವ ಯಾವುದೇ ಪ್ರಯತ್ನವನ್ನು ಕಾನೂನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.