ನವದೆಹಲಿ: ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ವಿವಿಧ ದೀರ್ಘಕಾಲೀನ ಕಾಯಿಲೆಗಳ ಚಿಕಿತ್ಸೆಗೆ ಬಳಸುವ 39 ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ಆದೇಶ ಹೊರಡಿಸಿದೆ. ಈ ಕ್ರಮದಿಂದ ಅಗತ್ಯ ಔಷಧಿಗಳ ಬೆಲೆ ಕೆಲವು ಸಂದರ್ಭಗಳಲ್ಲಿ ಕಡಿಮೆಯಾಗುವ ಸಾಧ್ಯತೆ ಇದ್ದು, ಲಕ್ಷಾಂತರ ರೋಗಿಗಳಿಗೆ ಆರ್ಥಿಕ ನಿರಾಳತೆ ಸಿಗುವ ನಿರೀಕ್ಷೆಯಿದೆ.
ಈ ನಿರ್ಧಾರವನ್ನು ಡ್ರಗ್ಸ್ (ಪ್ರೈಸ್ ಕಂಟ್ರೋಲ್) ಆದೇಶ–2013 (DPCO-2013) ಅಡಿಯಲ್ಲಿ ಜಾರಿಗೆ ತರಲಾಗಿದೆ. ಎನ್‌ಪಿಪಿಎ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ಸಂಬಂಧಿತ ಔಷಧಿಗಳನ್ನು ಮಾರಾಟ ಮಾಡದಂತೆ ಔಷಧ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಹೊಸ ದರಗಳನ್ನು ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (MRP)ಯಲ್ಲಿ ತಕ್ಷಣವೇ ಪರಿಷ್ಕರಿಸುವಂತೆ ಆದೇಶಿಸಲಾಗಿದೆ.
ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರು ದೀರ್ಘಕಾಲ ಅಥವಾ ಜೀವಮಾನವಿಡೀ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಹೊಸ ದರ ಮಿತಿ ಜಾರಿಯಾದ ಹಿನ್ನೆಲೆಯಲ್ಲಿ ತಿಂಗಳ ಹಾಗೂ ವಾರ್ಷಿಕ ಔಷಧ ವೆಚ್ಚದಲ್ಲಿ ಸ್ವಲ್ಪ ಮಟ್ಟಿನ ಉಳಿತಾಯವಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು, ಹಿರಿಯ ನಾಗರಿಕರು ಮತ್ತು ನಿವೃತ್ತರಿಗೆ ಈ ಕ್ರಮದಿಂದ ಅನುಕೂಲವಾಗಲಿದೆ.
ಮಧುಮೇಹ ಮತ್ತು ಬಿಪಿ ಔಷಧಿಗಳ ಜೊತೆಗೆ ಕ್ಯಾಲ್ಸಿಯಂ ಹಾಗೂ ವಿಟಮಿನ್-D3 ಮಾತ್ರೆಗಳ ಗರಿಷ್ಠ ಚಿಲ್ಲರೆ ದರವನ್ನು ಪ್ರತಿ ಮಾತ್ರೆಗೆ ₹8.93 (ಜಿಎಸ್‌ಟಿ ಸೇರಿ) ಎಂದು ಎನ್‌ಪಿಪಿಎ ನಿಗದಿಪಡಿಸಿದೆ. ಈ ಮಾತ್ರೆಗಳನ್ನು ಸಾಮಾನ್ಯವಾಗಿ ಹಿರಿಯ ನಾಗರಿಕರು, ಋತುಬಂಧದ ನಂತರದ ಮಹಿಳೆಯರು ಹಾಗೂ ಮೂಳೆ ದುರ್ಬಲತೆ ಇರುವವರಿಗೆ ವೈದ್ಯರು ಶಿಫಾರಸು ಮಾಡುತ್ತಾರೆ.
ಇದಲ್ಲದೆ, ನಾಯಿ ಅಥವಾ ರೇಬೀಸ್ ಶಂಕಿತ ಪ್ರಾಣಿಗಳ ಕಡಿತದ ಬಳಿಕ ತುರ್ತು ಚಿಕಿತ್ಸೆಯಲ್ಲಿ ಬಳಸುವ ಆ್ಯಂಟಿ-ರೇಬೀಸ್ ಇಮ್ಯುನೊಗ್ಲೋಬುಲಿನ್ ಇಂಜೆಕ್ಷನ್‌ನ ಗರಿಷ್ಠ ಚಿಲ್ಲರೆ ದರವನ್ನು ₹119.48ಕ್ಕೆ ನಿಗದಿಪಡಿಸಲಾಗಿದೆ. ಈ ಔಷಧಿಯನ್ನು ರೇಬೀಸ್ ಲಸಿಕೆಯೊಂದಿಗೆ ನೀಡಲಾಗುತ್ತಿದ್ದು, ಸೋಂಕಿನ ವಿರುದ್ಧ ತಕ್ಷಣದ ರಕ್ಷಣೆಯನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.















