ಮುಕ್ಕದಲ್ಲಿ ಅಕ್ರಮವಾಗಿ ನೆಲೆಸಿದ್ದ 8 ಬಾಂಗ್ಲಾದೇಶದ ಪ್ರಜೆಗಳ ಬಂಧನ

ಸುರತ್ಕಲ್: ಮುಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಂದಿ ಅಕ್ರಮ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತರನ್ನು ಮುಹಮ್ಮದ್ ಮುಖಾರ್ ಅಲಿ (36), ಮುಹಮ್ಮದ್ ರಾಕಿಬುರ್ ಹುಸೈನ್ (44), ಮುಹಮ್ಮದ್ ಅಝರುಲ್ ಇಸ್ಲಾಂ (36), ಮುಹಮ್ಮದ್ ಝದ್ ಹುಸನ್ (18), ಮುಹಮ್ಮದ್ ಬಿಲಾಲ್ ಹುಸೈನ್ (36), ಮುಹಮ್ಮದ್ ಹಾಸಿಬುಲ್ ಹಸನ್ ಶನ್ನೊ (37), ಮುಹಮ್ಮದ್ ಸಮೀವುಲ್ ಹಸನ್ (23) ಹಾಗೂ ಮುಹಮ್ಮದ್ ಸೈಬುರಹ್ಮಾನ್ ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ಅವರ ಮಾಹಿತಿ ಪ್ರಕಾರ, ಬಂಧಿತರು ಸುಮಾರು ಮೂರು ತಿಂಗಳ ಹಿಂದೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಮೂಲಕ ಭಾರತಕ್ಕೆ ಪ್ರವೇಶಿಸಿದ್ದರು. ಬಳಿಕ ಅಲ್ಲಿನ ಕೆಲವರ ಆಧಾರ್ ಕಾರ್ಡ್‌ಗಳ ಪ್ರತಿಗಳ ಮೇಲೆ ತಮ್ಮ ಭಾವಚಿತ್ರ ಅಂಟಿಸಿ ಬಣ್ಣದ ಜೆರಾಕ್ಸ್ ಪ್ರತಿಗಳನ್ನು ಬಳಸಿಕೊಂಡು ಕಳೆದ ಎರಡು ತಿಂಗಳಿನಿಂದ ಮುಕ್ಕದಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮುಕ್ಕದ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಅಕ್ರಮವಾಗಿ ವಿದೇಶಿ ಪ್ರಜೆಗಳು ವಾಸಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸ್ ಉಪನಿರೀಕ್ಷಕ ರಘು ನಾಯ್ಕ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿತ್ತು. ನಿರ್ಮಾಣ ಹಂತದ ಎರಡು ಕಟ್ಟಡಗಳ ಸಮೀಪ ಜೋಪಡಿ ಹಾಕಿಕೊಂಡು ವಾಸಿಸುತ್ತಿದ್ದ ಸುಮಾರು 54 ಮಂದಿಯನ್ನು ಪರಿಶೀಲಿಸಿದ ವೇಳೆ ಎಂಟು ಮಂದಿಯ ಬಳಿ ಬಾಂಗ್ಲಾದೇಶದ ಗುರುತಿನ ದಾಖಲೆಗಳು ಪತ್ತೆಯಾಗಿವೆ.

ಬಳಿಕ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಪೊಲೀಸರು, ಹಿರಿಯ ಅಧಿಕಾರಿಗಳ ಮೂಲಕ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಅವರ ನಿರ್ದೇಶನದಂತೆ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಸುಪರ್ದಿಗೆ ಒಪ್ಪಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.