ವಿರಾಜಪೇಟೆ: ಕ್ರೀಡೆಯ ತವರೂರು ಎಂದೇ ಹೆಸರಾಗಿರುವ ಕೊಡಗು ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗುತ್ತಿದೆ. ವೀರಾಜಪೇಟೆ ತಾಲೂಕಿನ ವಿ. ಬಾಡಗ ಗ್ರಾಮದಲ್ಲಿ ಸುಮಾರು ₹45 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಕ್ರೀಡಾ ವಸತಿ ಸಮುಚ್ಚಯ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ನಿರೀಕ್ಷೆ ಮೂಡಿಸಿದೆ.
ಸುಮಾರು 11.50 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಯೋಜನೆಗೆ ಆರಂಭಿಕ ಹಂತದಲ್ಲೇ ₹45 ಕೋಟಿ ಅನುದಾನ ಮೀಸಲಾಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಕ್ರೀಡಾಪಟುಗಳಿಗೆ ತರಬೇತಿ ಹಾಗೂ ವಸತಿ ಸೌಲಭ್ಯಗಳನ್ನು ಒಂದೇ ಆವರಣದಲ್ಲಿ ಒದಗಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ.
ಸಮುಚ್ಚಯದಲ್ಲಿ ಅತ್ಯಾಧುನಿಕ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣಗಳು, ಸುಸಜ್ಜಿತ ಜಿಮ್, ಈಜುಕೊಳ ಸೇರಿದಂತೆ ರಾಷ್ಟ್ರಮಟ್ಟದ ಗುಣಮಟ್ಟದ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಕೊಡಗಿನ ಯುವ ಪ್ರತಿಭೆಗಳು ಉತ್ತಮ ತರಬೇತಿಗಾಗಿ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಗೆ ತೆರಳುವ ಅಗತ್ಯ ಬಹುತೇಕ ತಪ್ಪಲಿದೆ.
ಯೋಜನೆಯ ಪ್ರಮುಖ ಉದ್ದೇಶ ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ವಿಶ್ವಮಟ್ಟದ ತರಬೇತಿ ನೀಡುವುದಾಗಿದೆ. ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಅಗತ್ಯವಿರುವ ವೈದ್ಯಕೀಯ ನೆರವು ಮತ್ತು ಪುನರ್ವಸತಿ ಸೌಲಭ್ಯಗಳನ್ನು ಇದೇ ಕೇಂದ್ರದಲ್ಲಿ ಕಲ್ಪಿಸುವ ಯೋಜನೆಯೂ ರೂಪಿಸಲಾಗಿದೆ.
ಈ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯಸಭಾ ಸದಸ್ಯ ಅಜಯ್ ಮಾಕನ್ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದಲೂ ಅನುದಾನ ದೊರೆತಿದ್ದು, ರಾಜ್ಯ ಸರ್ಕಾರವೂ ವಿಶೇಷ ಅನುದಾನ ನೀಡಿದೆ.
ದೇಶಕ್ಕೆ ಅನೇಕ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ನೀಡಿರುವ ಕೊಡಗಿನಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾ ವಸತಿ ಸಮುಚ್ಚಯವು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ಪ್ರಮುಖ ಕೇಂದ್ರವಾಗಿ ಬೆಳೆಯುವ ವಿಶ್ವಾಸ ವ್ಯಕ್ತವಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ಕೊಡಗಿನ ಕ್ರೀಡಾ ಕ್ಷೇತ್ರಕ್ಕೆ ಹೊಸ ದಿಕ್ಕು ಹಾಗೂ ಹೊಸ ಗುರುತು ದೊರೆಯುವ ನಿರೀಕ್ಷೆ ಸ್ಥಳೀಯರಲ್ಲಿ ಮೂಡಿದೆ.

















