ಉಡುಪಿ: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 1 ವಾರ ಅಂದರೆ ಜೂನ್ 30 ರಿಂದ ಜುಲೈ 6 ರ ವರೆಗೆ ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಯೆಂದು ಸೂಚಿಸಿರುತ್ತಾರೆ. ಈ ಹಿನ್ನಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದೆ.
ಸಾರ್ವಜನಿಕರು, ಮಕ್ಕಳು ಹಾಗೂ ಕಾರ್ಮಿಕರು ಮಳೆ, ಗಾಳಿ, ಸಿಡಿಲು ಬೀಳುವ ಸಂದರ್ಭದಲ್ಲಿ ಹೊರಗೆ ತಿರುಗಾಡದೆ, ಸೂಕ್ತ ಕಟ್ಟಡದಲ್ಲಿ ಆಶ್ರಯ ಪಡೆಯಬೇಕು. ಕೃಷಿಕರು ಮಳೆ/ಸಿಡಿಲಿನಂತಹ ಸಂದರ್ಭದಲ್ಲಿ ಹೊರಗಿನ ಕೃಷಿ ಚಟುವಟಿಕೆಯಿಂದ ದೂರವಿರಬೇಕು ಮತ್ತು ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೀನುಗಾರರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯಬಾರದು. ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಅಪಾಯಕಾರಿ ಮರ, ವಿದ್ಯುತ್ ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು.
ದುರ್ಬಲವಾದ / ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ / ಮರಗಳ ಕೆಳಗೆ ನಿಲ್ಲಬಾರದು. ಕಟ್ಟಡಗಳ ಮೇಲೆ ಅಪಾಯಕಾರಿ ಗೆಲ್ಲು/ರೆಂಬೆ-ಕೊಂಬೆಗಳಿದ್ದಲ್ಲಿ ಮೊದಲೇ ಕತ್ತರಿಸಿ ವಾಸಿಸುವ ಕಟ್ಟಡಗಳನ್ನು ರಕ್ಷಿಸಿಕೊಳ್ಳಬೇಕು.
ಹೆಚ್ಚು ಮಳೆಯಾಗುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಭೂಕುಸಿತವಾಗುವ ಸಂಭವ ಹೆಚ್ಚಾಗಿರುತ್ತದೆ ಹಾಗಾಗಿ ಇಂತಹ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ತಹಶೀಲ್ದಾರರ ಕಛೇರಿ ಅಥವಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ಸಂಪರ್ಕಿಸಿ ಹತ್ತಿರದ ಕಾಳಜಿ ಕೇಂದ್ರದಲ್ಲಿ ಸಾಕಷ್ಟು ಮುಂಚಿತವಾಗಿಯ ಉಳಿಯಬಹುದು.
ಮುಂದಿನ 7 ದಿನಗಳಲ್ಲಿ ಹೆಚ್ಚು ಗಾಳಿಯೊಂದಿಗೆ ಮಳೆ ಬರುವುದರಿಂದ ಸಾರ್ವಜನಿಕರು ಹೊರಗೆ ತಿರುಗಾಡದೆ ಸೂಕ್ತ ಕಟ್ಟಡದಲ್ಲಿ ವಾಸಿಸಬೇಕು. ದುರ್ಬಲ ಕಟ್ಟಡದಲ್ಲಿ ವಾಸವಿದ್ದಲ್ಲಿ ಅಥವಾ ಅಗತ್ಯವಿದ್ದಲ್ಲಿ ಮುಂಜಾಗೃತ ಕ್ರಮವಾಗಿ ಹತ್ತಿರದ ಕಾಳಜಿ ಕೇಂದ್ರದಲ್ಲಿ ಉಳಿಯಬಹುದು.
ಹೆಚ್ಚಿನ ಮಾಹಿತಿಗಾಗಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ತುರ್ತು ಸೇವೆಗೆ ಶುಲ್ಕ ರಹಿತ 1077 ಅಥವಾ ದೂ.ಸಂಖ್ಯೆ: 0820-2574802 ಅಥವಾ ಆಯಾ ತಾಲೂಕು ತಹಶೀಲ್ದಾರರ ಕಛೇರಿಗಳಾದ ಉಡುಪಿ ದೂ.ಸಂಖ್ಯೆ: 0820-2520417, ಕುಂದಾಪುರ ದೂ.ಸಂಖ್ಯೆ: 08254-230357, ಕಾರ್ಕಳ ದೂ.ಸಂಖ್ಯೆ: 08258-230201, ಕಾಪು ದೂ.ಸಂಖ್ಯೆ: 0820-2551444, ಬ್ರಹ್ಮಾವರ ದೂ.ಸಂಖ್ಯೆ: 0820-2560494, ಬೈಂದೂರು ದೂ.ಸಂಖ್ಯೆ: 08254-251657 ಹಾಗೂ ಹೆಬ್ರಿ ದೂ.ಸಂಖ್ಯೆ: 08253-250201 ಮತ್ತು ಉಡುಪಿ ನಗರಸಭೆ ಸಹಾಯವಾಣಿ ಸಂಖ್ಯೆ: 0820-2520306 ಗೆ ಕರೆಮಾಡಬಹುದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















