ಉಡುಪಿ: ಪುರಾತನ ಕಾಡಬೆಟ್ಟು ಶ್ರೀ ಅಬ್ಬಗದಾರಗ ವೀರಭದ್ರ ಸಪರಿವಾರ ಶನೈಶ್ಚರ ದೇವಳದ ಬ್ರಹ್ಮಕುಂಭಾಭಿಷೇಕ ಮಹೋತ್ಸವ 2027ರ ಫೆ.7ರಂದು ಭಾನುವಾರ ನಡೆಯಲಿದೆ ಎಂದು ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘೋಷಿಸಿದರು.
ದೇವಳದ ಸಮಗ್ರ ಜೀರ್ಣೋದ್ಧಾರ ಸಂಕಲ್ಪಿಸಿರುವ ಹಿನ್ನೆಲೆಯಲ್ಲಿ ಶನಿ ತ್ರಯೋದಶಿ ಶುಭ ದಿನವಾದ ಶನಿವಾರ ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ ಸಾಮೂಹಿಕ ಶನಿಶಾಂತಿ, ಕ್ಷೇತ್ರದ ಎಲ್ಲಾ ದೇವರಿಗೆ ವಿಶೇಷ ಪೂಜೆ, ಸಮಷ್ಟಿ ಪ್ರಾರ್ಥನೆ ನಡೆಸಿದ ತರುವಾಯ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶಾಭಿಷೇಕದ ದಿನಾಂಕವನ್ನು ಶ್ರೀಗಳು ಪ್ರಕಟಿಸಿದರು. ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು ದೇವರಲ್ಲಿ ನಿಶ್ಚಲವಾದ ದೃಢ ಭಕ್ತಿ ಇರಿಸಿಕೊಂಡಲ್ಲಿ ನಮ್ಮೆಲ್ಲ ಸಂಕಷ್ಟಗಳು ದೂರವಾಗುತ್ತವೆ.

ಶನೀಶ್ಚರ ಕಷ್ಟ ಕೊಡುವ ದೇವರು ಎಂಬ ತಪ್ಪು ಕಲ್ಪನೆ ಇದೆ. ಅದು ಸರಿಯಲ್ಲ. ಕಷ್ಟ ಕೊಡುವ ಮೂಲಕ ಭಕ್ತಿ ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸುವ ಶನೀಶ್ಚರ, ಭಕ್ತರ ಸಕಲಾಭೀಷ್ಟಗಳನ್ನು ಕರುಣಿಸುವ ದೇವರಾಗಿದ್ದು ಶನೀಶ್ಚರನ ಆರಾಧನೆಯಿಂದ ಶ್ರೇಯಸ್ಸು ಸಾಧ್ಯ ಎಂದರು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಉದಯಕುಮಾರ್ ಶೆಟ್ಟಿ, ಹೊಸ ದೇವಾಲಯ ನಿರ್ಮಾಣ ಮಾಡುವುದಕ್ಕಿಂತ ಹಳೆಯ ದೇವಾಲಯದ ಜೀರ್ಣೋದ್ಧಾರ ಶ್ರೇಯಸ್ಕರ. ಊರಿನ ದೇವಳದ ಜೀರ್ಣೋದ್ಧಾರದಿಂದ ಸಮಸ್ತರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆ ಹಿನ್ನೆಲೆಯಲ್ಲಿ ಸರ್ವರ ಸಹಕಾರ ಅಗತ್ಯ ಎಂದರು.
ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕುಮಾರಗುರು ತಂತ್ರಿ, ಶಾಸಕ ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ದೇವಳದ ಟ್ರಸ್ಟಿ ಪ್ರಕಾಶ ಶೆಟ್ಟಿ, ಉದ್ಯಮಿ ಸಾಯಿರಾಧಾ ಮನೋಹರ ಶೆಟ್ಟಿ, ವಿಹಿಂಪದ ಸುನಿಲ್ ಕೆ.ಆರ್., ಸಮಿತಿ ಉಪಾಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಮೋಹನ ಶೆಟ್ಟಿ ಮತ್ತು ರವಿ ಶೆಟ್ಟಿ, ಸಂಚಾಲಕ ಸುರೇಂದ್ರ ಶೇಖ, ಸಂಘಟನಾ ಕಾರ್ಯದರ್ಶಿ ಸಚಿನ್ ರಾಜ್ ರೈ, ನಗರಸಭಾ ಮಾಜಿ ಸದಸ್ಯ ಟಿ.ಜಿ. ಹೆಗ್ಡೆ ಮೊದಲಾದವರಿದ್ದರು.
ಸಮಿತಿ ಸಂಚಾಲಕ ರಾಜಗೋಪಾಲ ರೈ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಮಧುಕರ ಮುದ್ರಾಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಬೈಕಾಡಿ ಸುಪ್ರಸಾದ ಶೆಟ್ಟಿ ನಿರೂಪಿಸಿದರು.

















