ರಸ್ತೆ ವಿಭಾಜಕಗಳ ಮೇಲೆ ಕಾಣುವ ಕಪ್ಪು-ಹಳದಿ ಪಟ್ಟಿಗಳ ಬಗ್ಗೆ ನಿಮಗೆ ತಿಳಿದಿರಲೇಬೇಕು: ಇದರ ಹಿಂದಿದೆ ವೈಜ್ಞಾನಿಕ ಕಾರಣ

ನಗರ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚರಿಸುವಾಗ ರಸ್ತೆ ವಿಭಾಜಕಗಳ (ಡಿವೈಡರ್) ಮೇಲೆ ಪರ್ಯಾಯವಾಗಿ ಬಣ್ಣಿಸಲಾದ ಕಪ್ಪು ಮತ್ತು ಹಳದಿ ಪಟ್ಟಿಗಳನ್ನು ನೀವು ಗಮನಿಸಿರಬಹುದು. ಬಹುತೇಕರು ಇವುಗಳನ್ನು ಕೇವಲ ಅಲಂಕಾರಕ್ಕಾಗಿ ಬಳಸಲಾಗಿದೆ ಎಂದು ಭಾವಿಸುತ್ತಾರೆ. ಆದರೆ ಈ ಬಣ್ಣಗಳ ಬಳಕೆಯ ಹಿಂದೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಮಹತ್ವದ ವೈಜ್ಞಾನಿಕ ಕಾರಣವಿದೆ.

ಕಪ್ಪು ಮತ್ತು ಹಳದಿ ಬಣ್ಣಗಳ ಸಂಯೋಜನೆಯು ಹೆಚ್ಚಿನ ದೃಶ್ಯ ವ್ಯತಿರಿಕ್ತತೆ (High Contrast) ಉಂಟುಮಾಡುತ್ತದೆ. ಇದರಿಂದ ರಸ್ತೆ ವಿಭಾಜಕಗಳು ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುತ್ತವೆ. ಹಗಲು ಮಾತ್ರವಲ್ಲದೆ ರಾತ್ರಿ ವೇಳೆಯಲ್ಲಿಯೂ, ಮಂಜು, ಮಳೆ ಅಥವಾ ಕಡಿಮೆ ಗೋಚರತೆಯಂತಹ ಪರಿಸ್ಥಿತಿಗಳಲ್ಲೂ ಚಾಲಕರು ರಸ್ತೆಯ ಗಡಿ ಮತ್ತು ದಿಕ್ಕನ್ನು ಸುಲಭವಾಗಿ ಗುರುತಿಸಬಹುದು.

ಯಾಕೆ ಈ ಬಣ್ಣ?

ರಾತ್ರಿ ವೇಳೆ ವಾಹನಗಳ ಹೆಡ್‌ಲೈಟ್‌ಗಳ ಬೆಳಕು ಈ ಬಣ್ಣಗಳ ಮೇಲೆ ಬೀಳುತ್ತಿದ್ದಂತೆ ಅವು ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತವೆ. ಅನೇಕ ರಸ್ತೆಗಳಲ್ಲಿ ಕಪ್ಪು-ಹಳದಿ ಪಟ್ಟಿಗಳ ಜೊತೆಗೆ ಪ್ರತಿಫಲಿತ (Reflective) ಬಣ್ಣಗಳು ಅಥವಾ ವಿಶೇಷ ಪ್ರತಿಫಲಕ ಸ್ಟಿಕ್ಕರ್‌ಗಳನ್ನೂ ಅಳವಡಿಸಲಾಗುತ್ತದೆ. ಇದರಿಂದ ದೂರದಿಂದಲೇ ರಸ್ತೆ ವಿಭಾಜಕ ಗೋಚರಿಸಿ, ಚಾಲಕರು ಸಮಯಕ್ಕೆ ಸರಿಯಾಗಿ ವಾಹನದ ವೇಗ ಮತ್ತು ದಿಕ್ಕನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ತಜ್ಞರ ಪ್ರಕಾರ, ಕಪ್ಪು ಮತ್ತು ಹಳದಿ ಬಣ್ಣಗಳು ಅಪಾಯ ಅಥವಾ ಎಚ್ಚರಿಕೆಯ ಸಂಕೇತಗಳಾಗಿವೆ. ಆದ್ದರಿಂದ ಭಾರತ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿಯೂ ರಸ್ತೆ ಸುರಕ್ಷತಾ ಮಾನದಂಡಗಳ ಅನುಸಾರ ಇದೇ ಬಣ್ಣಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಈ ಬಣ್ಣಗಳು ಚಾಲಕರ ಗಮನವನ್ನು ತಕ್ಷಣ ಸೆಳೆಯುವುದರ ಜೊತೆಗೆ, ಲೇನ್ ಶಿಸ್ತು ಮತ್ತು ಸುರಕ್ಷಿತ ಚಾಲನೆಗೆ ಸಹಕಾರಿಯಾಗುತ್ತವೆ.

ಸುರಕ್ಷಿತಾಗಿರಲು ಸಹಕಾರಿ:

ರಸ್ತೆಗಳಲ್ಲಿ ಕಾಣುವ ಬಿಳಿ ಗುರುತುಗಳಿಗೂ ತಮ್ಮದೇ ಆದ ಮಹತ್ವವಿದೆ. ರಸ್ತೆಯ ಮಧ್ಯದಲ್ಲಿರುವ ನಿರಂತರ ಬಿಳಿ ರೇಖೆ ಸಾಮಾನ್ಯವಾಗಿ ಓವರ್‌ಟೇಕ್ ಮಾಡಬಾರದು ಎಂಬ ಸೂಚನೆ ನೀಡುತ್ತದೆ. ಅದೇ ಮುರಿದ ಬಿಳಿ ರೇಖೆ ಕಂಡುಬಂದರೆ, ಎದುರು ದಿಕ್ಕಿನಲ್ಲಿ ವಾಹನಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಮಾತ್ರ ಸುರಕ್ಷಿತವಾಗಿ ಓವರ್‌ಟೇಕ್ ಮಾಡಲು ಅವಕಾಶವಿದೆ ಎಂಬ ಅರ್ಥವನ್ನು ಸೂಚಿಸುತ್ತದೆ.

ತಜ್ಞರ ಅಭಿಪ್ರಾಯದಂತೆ, ರಸ್ತೆಗಳ ಮೇಲಿನ ಬಣ್ಣಗಳು ಮತ್ತು ಗುರುತುಗಳು ಕೇವಲ ಅಲಂಕಾರಕ್ಕಾಗಿ ಅಲ್ಲ. ಅವು ಸಂಚಾರ ನಿಯಂತ್ರಣ, ಚಾಲಕರಿಗೆ ಮಾರ್ಗದರ್ಶನ, ಗೋಚರತೆ ಹೆಚ್ಚಿಸುವುದು ಹಾಗೂ ಅಪಘಾತಗಳನ್ನು ತಡೆಗಟ್ಟುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ರಸ್ತೆ ಚಿಹ್ನೆಗಳು ಮತ್ತು ಸಂಚಾರ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ವಾಹನ ಸವಾರನ ಜವಾಬ್ದಾರಿಯಾಗಿದೆ.