ಉದ್ಯೋಗಿಗಳಿಗೆ ದೊಡ್ಡ ಶಾಕ್ ಕೊಟ್ಟ ವೋಕ್ಸ್‌ವ್ಯಾಗನ್ ಕಾರು ಕಂಪೆನಿ: ಒಟ್ಟು1 ಲಕ್ಷ ಉದ್ಯೋಗ ಕಡಿತ, ನಾಲ್ಕು ಪ್ರಮುಖ ಉತ್ಪಾದನಾ ಘಟಕ ಬಂದ್!

ಬರ್ಲಿನ್: ಜರ್ಮನಿಯ ವಾಹನ ತಯಾರಿಕಾ ದೈತ್ಯ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿರುವ ವೋಕ್ಸ್‌ವ್ಯಾಗನ್ Volkswagen ವೆಚ್ಚ ಕಡಿತ ಮತ್ತು ಆರ್ಥಿಕ ಒತ್ತಡದಿಂದ ಹೊರಬರಲು 1 ಲಕ್ಷ ಉದ್ಯೋಗಿಗಳನ್ನು ಹಂತಹಂತವಾಗಿ ವಜಾಗೊಳಿಸುವ ನಿರ್ಧಾರಕ್ಕೆ ಬಂದಿದ್ದು. ಉದ್ಯೋಗಿಗಳಿಗೆ ಇದೊಂದು ದೊಡ್ಡ ಶಾಕ್ ನೀಡಿದೆ. ಜರ್ಮನಿಯಲ್ಲಿರುವ ತನ್ನ ನಾಲ್ಕು ಪ್ರಮುಖ ಉತ್ಪಾದನಾ ಘಟಕಗಳನ್ನು ಮುಚ್ಚಲು ಸಂಸ್ಥೆ ನಿರ್ಧರಿಸಿದೆ.

ಕಂಪನಿಯ ಮೇಲ್ವಿಚಾರಣಾ ಮಂಡಳಿಯ ಸದಸ್ಯರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಜುಲೈ 9ರಂದು ನಡೆಯಲಿರುವ ಸಭೆಯಲ್ಲಿ ಈ ಪ್ರಸ್ತಾವನೆ ಕುರಿತು ಅಂತಿಮ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಚೀನಾದ ವಾಹನ ತಯಾರಿಕಾ ಕಂಪನಿಗಳಿಂದ ಹೆಚ್ಚುತ್ತಿರುವ ಸ್ಪರ್ಧೆ, ಅಮೆರಿಕದ ಆಮದು ನಿಯಮಗಳು ಮತ್ತು ಸುಂಕಗಳ ಕಠಿಣತೆ, ಜೊತೆಗೆ ಯುರೋಪ್‌ನಲ್ಲಿ ವಾಹನಗಳ ಬೇಡಿಕೆ ಕುಸಿತಗೊಂಡಿರುವುದು ಈ ನಿರ್ಧಾರದ ಪ್ರಮುಖ ಕಾರಣಗಳಾಗಿವೆ ಎನ್ನಲಾಗಿದೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹ್ಯಾನೋವರ್, ಝ್ವಿಕಾವ್, ಎಮ್ಡೆನ್ ಮತ್ತು ನೆಕ್ಕರ್‌ಸುಲ್ಮ್ ಘಟಕಗಳಲ್ಲಿ ಉತ್ಪಾದನೆಯಲ್ಲಿರುವ ಕಾರು ಮಾದರಿಗಳ ತಯಾರಿಕೆ ಪೂರ್ಣಗೊಂಡ ಬಳಿಕ ಅವುಗಳನ್ನು ಹಂತಹಂತವಾಗಿ ಮುಚ್ಚುವ ಯೋಜನೆ ಇದೆ. ಇದರಿಂದ ಮೊದಲ ಹಂತದಲ್ಲೇ 45 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದರೊಂದಿಗೆ ಮುಂದಿನ ಐದು ವರ್ಷಗಳಲ್ಲಿ ಹೂಡಿಕೆಯನ್ನು ಶೇ.15ರಷ್ಟು ಕಡಿತಗೊಳಿಸಿ ಸುಮಾರು 148 ಬಿಲಿಯನ್ ಡಾಲರ್ ಮಟ್ಟಕ್ಕೆ ತರುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು ಹೇಳಲಾಗಿದೆ.

ಈ ಬೆಳವಣಿಗೆಯ ನಡುವೆಯೇ ಶುಕ್ರವಾರ Volkswagen ಷೇರುಗಳು ಕಳೆದ 16 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಷೇರು ಮೌಲ್ಯವು ಶೇ.3.4ರಷ್ಟು ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.

ಇದಕ್ಕೂ ಮುನ್ನ 1990ರ ದಶಕದಲ್ಲಿ General Motors ಸುಮಾರು 74 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿ 21 ಘಟಕಗಳನ್ನು ಮುಚ್ಚುವ ಮೂಲಕ ವಾಹನ ಉದ್ಯಮದ ಅತಿದೊಡ್ಡ ಪುನರ್‌ರಚನೆ ನಡೆಸಿತ್ತು. ಇದೀಗ ವೋಕ್ಸ್‌ ವ್ಯಾಗನ್ ಕೂಡ ಆರ್ಥಿಕ ಸವಾಲುಗಳನ್ನು ಎದುರಿಸಲು ಅದೇ ರೀತಿಯ ಕಠಿಣ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.