ಉಡುಪಿ: ಮಗು ಅಕ್ರಮ ಮಾರಾಟ ಪ್ರಕರಣ- ವೈದ್ಯ ಸೇರಿ ನಾಲ್ವರ ಬಂಧನ

ಉಡುಪಿ: ಒಂದು ತಿಂಗಳ ಹೆಣ್ಣು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿ ಉಡುಪಿ ಮಹಿಳಾ ಪೊಲೀಸ್ ಠಾಣೆ ಪೊಲೀಸರು ವೈದ್ಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಉಡುಪಿ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ (76), ಸಂತೆಕಟ್ಟೆ ನೇಜಾರಿನ ಎಸ್. ಪ್ರಕಾಶ್ (50), ಕಾರ್ಕಳದ ಸೂಡ ನಿವಾಸಿ ಸಂಪತ್ (22) ಹಾಗೂ ನಂದಳಿಕೆಯ ಸುಪ್ರೀತಿ (22) ಬಂಧಿತರು.
ಜೂನ್ 19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿ, ಸಂತೆಕಟ್ಟೆ ನೇಜಾರಿನ ದಂಪತಿ ಪ್ರಕಾಶ್ ಹಾಗೂ ಪೂರ್ಣಿಮಾ ಅವರು ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಯಾವುದೇ ಕಾನೂನುಬದ್ಧ ದತ್ತು ಪ್ರಕ್ರಿಯೆ ಇಲ್ಲದೆ ಸಾಕುತ್ತಿದ್ದಾರೆ ಎಂದು ತಿಳಿಸಿದ್ದರು.
ಇದನ್ನಾಧರಿಸಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸಿಬ್ಬಂದಿ ಪ್ರಕಾಶ್ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿ ಹೆಣ್ಣು ಮಗು ಹಾಗೂ ಪೂರ್ಣಿಮಾ ಅವರ ಅಕ್ಕ ಲಕ್ಷ್ಮೀ ಇದ್ದರು. ಮಗುವಿನ ಕುರಿತು ವಿಚಾರಿಸಿದಾಗ ಅವರು ಅನುಮಾನಾಸ್ಪದ ಮಾಹಿತಿ ನೀಡಿದ್ದರಿಂದ ಹೆಚ್ಚಿನ ತನಿಖೆ ಕೈಗೊಳ್ಳಲಾಯಿತು.
ತನಿಖೆಯಲ್ಲಿ, ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗದ ಕಾರಣ ಪ್ರಕಾಶ್ ಮತ್ತು ಪೂರ್ಣಿಮಾ ಅವರು ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ತಿಳಿದುಬಂದಿದೆ. ಈ ವೇಳೆ ಆಸ್ಪತ್ರೆಯಲ್ಲಿ ಮಗು ಇರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅವರು ವೈದ್ಯ ಡಾ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗು ನೀಡುವಂತೆ ಕೋರಿದ್ದರು. ಅದಕ್ಕೆ ಒಪ್ಪಿದ ವೈದ್ಯರು ಹೆಣ್ಣು ಮಗುವನ್ನು ದಂಪತಿಗೆ ನೀಡಿದ್ದು, ಬಳಿಕ ಮಗುವಿನ ಜನನ ಪ್ರಮಾಣಪತ್ರ ಸೇರಿದಂತೆ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟಿದ್ದರು. ನಂತರ ಮಗುವಿನ ಜನನ ಪ್ರಮಾಣ ಪತ್ರವನ್ನು ಉಡುಪಿ ನಗರಸಭೆಯಲ್ಲಿ ಪಡೆದಿದ್ದು, ಮಗುವಿನ ಜೈವಿಕ ಪೋಷಕರು ಯಾರು ಎಂದು ತಿಳಿದಿರುವುದಿಲ್ಲ ಎಂದು ದಂಪತಿ ತನಿಖೆ ವೇಳೆ ತಿಳಿಸಿದ್ದಾರೆ.
ಆರೋಪಿಗಳು ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಒಳಸಂಚು ರೂಪಿಸಿ, ಮಗುವಿನ ಜನನ ಮತ್ತು ಪೋಷಕರ ಸಂಬಂಧಿತ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮಗುವನ್ನು ಕಳ್ಳಸಾಗಣೆ ಮೂಲಕ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಮೊದಲಿಗೆ ವೈದ್ಯ ಡಾ. ಸುರೇಂದ್ರ ಕಾಮತ್ ಹಾಗೂ ಮಗು ಪಡೆದ ಪ್ರಕಾಶ್ ಅವರನ್ನು ಬಂಧಿಸಲಾಗಿದ್ದು, ಬಳಿಕ ಮಗು ಹಸ್ತಾಂತರಿಸಿದ ಆರೋಪದಡಿ ಸಂಪತ್ ಮತ್ತು ಸುಪ್ರೀತಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.