ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ: ದಂಡ ವಸೂಲಿ

ಉಡುಪಿ: ಕಾಪು ತಾಲೂಕಿನಲ್ಲಿ ಕೋಟ್ಪಾ 2003 ಕಾಯಿದೆಯನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿಯವರ ನೇತೃತ್ವದಲ್ಲಿ ಗುರುವಾರ ಪಡುಬಿದ್ರಿ ಪೇಟೆ ಹಾಗೂ ಬಸ್‌ಸ್ಟಾಂಡ್‌ಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ಸೆಕ್ಷನ್ 4, 6(ಎ) ಮತ್ತು 6(ಬಿ) ಅಡಿಯಲ್ಲಿ ಒಟ್ಟು 44 ಪ್ರಕರಣಗಳನ್ನು ದಾಖಲಿಸಿ, ರೂ. 17,000 ದಂಡ ವಸೂಲಿ ಮಾಡಲಾಯಿತು.

ಅದರಂತೆ ಸೆಕ್ಷನ್ 4, 6(ಎ) ಮತ್ತು 6 (ಬಿ) ನಾಮ ಫಲಕಗಳನ್ನು ಸದರಿ ದಾಳಿಯಲ್ಲಿ ವಿತರಿಸಿ 2003 ರ ಕೋಟ್ಪಾ ಕಾಯಿದೆ ಬಗ್ಗೆ ಅರಿವು ಮೂಡಿಸಲಾಯಿತು.

ದಾಳಿಯಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಹಿರಿಯ ಆರೊಗ್ಯ ನಿರೀಕ್ಷಣಾಧಿಕಾರಿಗಳಾದ ಬಸವರಾಜ್ ಜಾಡರ್ ಮತ್ತು ಜಗದೀಶ್ ರಾವ್, ಕ್ಷೇತ್ರ ಆರೊಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯ್ಕ್, ಪಡುಬಿದ್ರಿ ಪೋಲಿಸ್ ಠಾಣೆಯ ಶ್ರೀಧರ್ ಆರ್, ಕಾರ್ಮಿಕ ನಿರೀಕ್ಷಕ ಎನ್.ಪಿ.ಎಲ್ ಸಂಜಯ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಂಯೋಜಕಿ ಮಂಜುಳಾ ಹಾಗೂ ಸೋಷಿಯಲ್ ವರ್ಕರ್ ಮಹೇಶ್ ಡಿ. ಭಂಡಾರಿ ಉಪಸ್ಥಿತರಿದ್ದರು.