ಉಡುಪಿ: ನಗರದ ಕಿನ್ನಿಮೂಲ್ಕಿ ಅಗ್ನಿಶಾಮಕ ದಳ ರಸ್ತೆಯ ಪಕ್ಕದಲ್ಲಿ ಹಲವು ವರ್ಷಗಳಿಂದ ಅಂಚೆ ಪೆಟ್ಟಿಗೆಯೊಂದು ಅನಾಥವಾಗಿ ಬಿದ್ದಿದ್ದು, ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಅಂಚೆ ಸೇವೆಯ ಅನುಕೂಲಕ್ಕಾಗಿ ಅಳವಡಿಸಲಾಗಿದ್ದ ಅಂಚೆ ಪೆಟ್ಟಿಗೆ ಮುರಿದು ರಸ್ತೆ ಬದಿಯಲ್ಲಿ ಬಿದ್ದಿದ್ದು, ಇದುವರೆಗೆ ಅದನ್ನು ತೆರವುಗೊಳಿಸುವ ಅಥವಾ ದುರಸ್ತಿಗೊಳಿಸುವ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಂಚೆ ಇಲಾಖೆಯಾಗಲಿ, ಉಡುಪಿ ನಗರಸಭೆಯಾಗಲಿ ರಸ್ತೆ ಬದಿಯಲ್ಲಿ ಬಿದ್ದಿರುವ ಅಂಚೆ ಪೆಟ್ಟಿಗೆಯ ಕಡೆ ಗಮನ ಹರಿಸಿಲ್ಲ. ಹಲವು ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಬಿದ್ದಿರುವುದರಿಂದ ಸ್ಥಳದ ಸೌಂದರ್ಯಕ್ಕೂ ಧಕ್ಕೆಯಾಗಿದ್ದು, ಪಾದಚಾರಿಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ರಸ್ತೆ ಬದಿಯಲ್ಲಿ ಬಿದ್ದಿರುವ ಅಂಚೆ ಪೆಟ್ಟಿಗೆಯನ್ನು ಕೂಡಲೇ ತೆರವುಗೊಳಿಸಿ, ಅಗತ್ಯವಿದ್ದರೆ ಅದನ್ನು ದುರಸ್ತಿಗೊಳಿಸಿ ಮರುಸ್ಥಾಪಿಸಬೇಕು. ಇಲ್ಲವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಸಮಸ್ಯೆ ನಿವಾರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

















