ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುವ ನಕಲಿ ಏಜೆಂಟ್ ಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ವಿದೇಶದಲ್ಲಿ ಉದ್ಯೋಗ ಪಡೆಯುವ ಕನಸು ಹೊಂದಿರುವವರು ನಕಲಿ ಏಜೆಂಟ್‌ಗಳ ಮೋಸಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಲ್ಲಿ ಉದ್ಯೋಗ ಕಲ್ಪಿಸುವ ಎಲ್ಲಾ ನೇಮಕಾತಿ ಏಜೆನ್ಸಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಡಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು ಎಂದು ತಿಳಿಸಿದರು. ನಗರದಲ್ಲಿ ಸುಮಾರು 25ರಿಂದ 30 ಏಜೆನ್ಸಿಗಳು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ ಎಂದರು.

ನೋಂದಾಯಿತ ಏಜೆನ್ಸಿಗಳನ್ನು ಸಂಪರ್ಕಿಸದೆ ನಕಲಿ ಏಜೆಂಟ್‌ಗಳನ್ನು ನಂಬಿ ಹಣ ಪಾವತಿಸುವ ಅನೇಕರು ವಂಚನೆಗೆ ಒಳಗಾಗುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಿದರೂ, ವಂಚನೆಗೊಳಗಾದ ಹಣವನ್ನು ಸಂಪೂರ್ಣವಾಗಿ ಮರುಪಡೆಯುವುದು ಕಷ್ಟಕರವಾಗುತ್ತಿದೆ ಎಂದು ಅವರು ಹೇಳಿದರು.

ಆದ್ದರಿಂದ ವಿದೇಶದಲ್ಲಿ ಉದ್ಯೋಗಕ್ಕೆ ತೆರಳಲು ಬಯಸುವವರು ಏಜೆನ್ಸಿಯ ಮಾನ್ಯತೆ ಹಾಗೂ ನೋಂದಣಿ ವಿವರಗಳನ್ನು ಪರಿಶೀಲಿಸಿ, MEA ಮಾನ್ಯತೆ ಪಡೆದ ಏಜೆನ್ಸಿಗಳ ಮೂಲಕವೇ ಪ್ರಕ್ರಿಯೆ ಮುಂದುವರಿಸಬೇಕು ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

ವಿದೇಶ ಉದ್ಯೋಗದ ಆಮಿಷಕ್ಕೆ ಒಳಗಾಗಿ ಆತುರದ ನಿರ್ಧಾರ ಕೈಗೊಳ್ಳದೆ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಜಾಗರೂಕರಾಗಿರುವುದೇ ವಂಚನೆಯಿಂದ ಪಾರಾಗುವ ಉತ್ತಮ ಮಾರ್ಗವಾಗಿದೆ ಎಂದು ಅವರು ಸಲಹೆ ನೀಡಿದರು.