ನವದೆಹಲಿ: ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾ ಹಾಡುಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಗಾಯಕ ಸೋನು ನಿಗಂ ತಮ್ಮ ಆರೋಗ್ಯದ ಕುರಿತು ಆತಂಕಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನರಗಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವುದಾಗಿ, ಈ ಸಮಸ್ಯೆಯಿಂದ ಸ್ವರವೂ ಬದಲಾಗಿರುವುದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ತಿಳಿಸಿದ್ದು, ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ.
ಕಳೆದ ಒಂದು ವಾರದಿಂದ ತಾವು ತೀವ್ರವಾದ ನರ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಎಂಆರ್‌ಐ (MRI) ಹಾಗೂ ಸಿಟಿ ಸ್ಕ್ಯಾನ್ (CT Scan) ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿರುವುದಾಗಿ ಸೋನು ನಿಗಂ ತಿಳಿಸಿದ್ದಾರೆ. ನರಗಳ ಮೇಲೆ ಒತ್ತಡ ಉಂಟಾಗಿರುವ ಕಾರಣ ತೀವ್ರ ನೋವು ಅನುಭವಿಸುತ್ತಿದ್ದು, ಚಿಕಿತ್ಸೆಗಾಗಿ ಹೆಚ್ಚಿನ ಪ್ರಮಾಣದ ಔಷಧಿಗಳನ್ನು ಸೇವಿಸುತ್ತಿರುವುದಾಗಿ ಹೇಳಿದ್ದಾರೆ.
ಫಿಸಿಯೋಥೆರಪಿ ಚಿಕಿತ್ಸೆಯೂ ನೋವಿನಿಂದ ಕೂಡಿದ್ದು, ನೋವು ನಿವಾರಕ ಮಾತ್ರೆಗಳ ನೆರವಿನಿಂದ ಚಿಕಿತ್ಸೆ ಮುಂದುವರಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಔಷಧಿಗಳ ಪರಿಣಾಮದಿಂದ ತಮ್ಮ ಧ್ವನಿಯ ಮೇಲೂ ಪರಿಣಾಮ ಬೀರಿದ್ದು, ಗಂಟಲು ಭಾರವಾದ ಅನುಭವವಾಗುತ್ತಿದೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಈಗಾಗಲೇ ಒಪ್ಪಿಕೊಂಡಿರುವ ಲೈವ್ ಕಾರ್ಯಕ್ರಮಗಳನ್ನು ರದ್ದುಪಡಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿರುವ ಸೋನು ನಿಗಂ, ಆರೋಗ್ಯ ಸಮಸ್ಯೆಯ ನಡುವೆಯೂ ಅಭಿಮಾನಿಗಳಿಗಾಗಿ ವೇದಿಕೆಯಲ್ಲಿ ಹಾಡಲು ಸಿದ್ಧವಾಗಿರುವುದಾಗಿ ಹೇಳಿದ್ದಾರೆ.
ಸೋನು ನಿಗಂ ಹಂಚಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಶೀಘ್ರ ಗುಣಮುಖತೆಗಾಗಿ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಹಲವರು ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದು, ಅಗತ್ಯವಿದ್ದರೆ ವಿಶ್ರಾಂತಿ ಪಡೆಯುವಂತೆ ಮನವಿ ಮಾಡಿದ್ದಾರೆ.

















