ಬೆಂಗಳೂರು: ರಾಜ್ಯದ ಗೃಹಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು, ಸಂಘಟನೆಯ ಕಾರ್ಯವೈಖರಿ, ಆರ್ಥಿಕ ಮೂಲಗಳು, ಕಾನೂನಾತ್ಮಕ ಸ್ಥಾನಮಾನ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ.
ಪತ್ರದಲ್ಲಿ, ರಾಷ್ಟ್ರೀಯ ಸ್ವಯಂಸೇಕ ಸಂಘ ದೇಶದ ಅತಿದೊಡ್ಡ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳಲ್ಲಿ ಒಂದಾಗಿದ್ದು, ಅದರ ಚಟುವಟಿಕೆಗಳು ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿವೆ. ಹೀಗಾಗಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಂಘಟನೆ ತನ್ನ ಮೂಲಭೂತ ಮಾಹಿತಿಗಳನ್ನು ಬಹಿರಂಗಪಡಿಸಬೇಕೆಂದು ಸಚಿವರು ತಿಳಿಸಿದ್ದಾರೆ. ಹಾಗೂ ಪ್ರಶ್ನೆಗಳನ್ನು ಕೇಳಿದ್ದಾರೆ.
ಖರ್ಗೆ ಕೇಳಿರುವ 8 ಪ್ರಮುಖ ಪ್ರಶ್ನೆಗಳು
- ಕಾನೂನಾತ್ಮಕ ಸ್ಥಾನಮಾನ ಮತ್ತು ಸಂಘಟನಾ ರಚನೆ
ಆರ್ಎಸ್ಎಸ್ನ ಅಧಿಕೃತ ಕಾನೂನು ಸ್ವರೂಪ ಏನು? ಅದರ ಆಂತರಿಕ ಸಂಘಟನಾ ರಚನೆ ಹೇಗಿದೆ? - ಪದಾಧಿಕಾರಿಗಳ ಮಾಹಿತಿ
ಸಂಘದ ಪ್ರಮುಖ ಪದಾಧಿಕಾರಿಗಳು ಹಾಗೂ ಅಧಿಕೃತ ಪ್ರತಿನಿಧಿಗಳ ಸಂಪೂರ್ಣ ವಿವರವೇನು? - ದೇಣಿಗೆ ಮತ್ತು ಆದಾಯದ ಮೂಲಗಳು
ಸಂಘಟನೆಗೆ ಬರುವ ದೇಣಿಗೆಗಳು, ಕೊಡುಗೆಗಳು ಮತ್ತು ಇತರ ಆದಾಯ ಮೂಲಗಳು ಯಾವುವು? - ಆಸ್ತಿ ಮತ್ತು ವೆಚ್ಚಗಳ ವಿವರ
ಸಂಘಟನೆಯ ಒಟ್ಟು ವೆಚ್ಚ ಮತ್ತು ಅದರ ಹೆಸರಿನಲ್ಲಿರುವ ಆಸ್ತಿಗಳ ಮಾಹಿತಿ ಏನು? - ತೆರಿಗೆ ಪಾವತಿ
ಪ್ರಚಲಿತ ಕಾನೂನುಗಳ ಪ್ರಕಾರ ಸಂಘವು ತೆರಿಗೆ ಪಾವತಿಸುತ್ತಿದೆಯೇ? - ನೋಂದಣಿ ರಹಿತ ಕಾರ್ಯನಿರ್ವಹಣೆ
ಯಾವುದೇ ಅಧಿಕೃತ ನೋಂದಣಿ ಇಲ್ಲದೆ ವ್ಯಾಪಕ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಇರುವ ಕಾನೂನಾತ್ಮಕ ಆಧಾರ ಯಾವುದು? - ಸಾರ್ವಜನಿಕ ಹೊಣೆಗಾರಿಕೆ ಚೌಕಟ್ಟು
ಸಾರ್ವಜನಿಕ ಹೊಣೆಗಾರಿಕೆ ಇಲ್ಲದೆ ಕಾರ್ಯನಿರ್ವಹಿಸಲು ಸಂಘವು ಅವಲಂಬಿಸಿರುವ ಸಾಂವಿಧಾನಿಕ ಹಾಗೂ ಕಾನೂನುಬದ್ಧ ವ್ಯವಸ್ಥೆ ಯಾವುದು? - ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ
ಪಥಸಂಚಲನ, ಸಾರ್ವಜನಿಕ ಸಭೆ, ಬೃಹತ್ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಪಡೆದಿರುವ ಅನುಮತಿಗಳು ಮತ್ತು ನಿಯಮ ಪಾಲನೆಯ ವಿವರಗಳೇನು?
ಪಾರದರ್ಶಕತೆಗೆ ಒತ್ತು
ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಈ ಮಾಹಿತಿಗಳನ್ನು ಸಾರ್ವಜನಿಕರ ಮುಂದೆ ಇಡಬೇಕು ಎಂದು ಪ್ರಿಯಾಂಗ್ ಖರ್ಗೆ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.















