ಮಂಗಳೂರು/ಕಾಸರಗೋಡು: ಕರ್ನಾಟಕದ ‘ಶಕ್ತಿ’ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ದೊರೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಕರಾವಳಿ ಭಾಗದ ಮಹಿಳೆಯರಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದ್ದು, ಕರ್ನಾಟಕದಿಂದ ಕೇರಳದ ಕಾಸರಗೋಡಿಗೆ ಸಹ ಉಚಿತವಾಗಿ ಪ್ರಯಾಣಿಸುವ ಅವಕಾಶ ಲಭಿಸಿದೆ.
ಕೇರಳ ಸರ್ಕಾರದ ಬಹುನಿರೀಕ್ಷಿತ ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣ ಯೋಜನೆ ಜೂನ್ 15ರಿಂದ ಜಾರಿಗೆ ಬಂದಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಸಂಚರಿಸುವ 75 ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಈ ಸೌಲಭ್ಯ ಲಭ್ಯವಿದ್ದು, ಯಾವುದೇ ಗುರುತಿನ ಚೀಟಿ ಅಥವಾ ಪೂರ್ವ ನೋಂದಣಿಯ ಅಗತ್ಯವಿಲ್ಲ ಎಂಬುದು ವಿಶೇಷ.
ಈ ಯೋಜನೆಯಿಂದ ಕರಾವಳಿ ಕರ್ನಾಟಕದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಾಸರಗೋಡು-ಮಂಗಳೂರು, ಕಾಸರಗೋಡು-ಪುತ್ತೂರು ಹಾಗೂ ಕಾಸರಗೋಡು-ಸುಳ್ಯ ಅಂತರರಾಜ್ಯ ಮಾರ್ಗಗಳಲ್ಲಿ ಸಂಚರಿಸುವ ಕೇರಳ ಕೆಎಸ್‌ಆರ್‌ಟಿಸಿ ಸಾಮಾನ್ಯ (ಆರ್ಡಿನರಿ) ಬಸ್‌ಗಳಲ್ಲಿಯೂ ಉಚಿತ ಪ್ರಯಾಣ ಸೌಲಭ್ಯ ಅನ್ವಯವಾಗಲಿದೆ.
ಹೀಗಾಗಿ ಕರ್ನಾಟಕದ ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯದ ಯಾವುದೇ ಭಾಗದಿಂದ ಉಚಿತವಾಗಿ ಪುತ್ತೂರು ಅಥವಾ ಸುಳ್ಯಕ್ಕೆ ಆಗಮಿಸಿ, ಅಲ್ಲಿಂದ ಕೇರಳದ ಕಾಸರಗೋಡಿಗೆ ಸಹ ಯಾವುದೇ ಪ್ರಯಾಣ ದರ ಪಾವತಿಸದೆ ತೆರಳಬಹುದಾಗಿದೆ.
ಮಂಗಳೂರು-ಕಾಸರಗೋಡು ಮಾರ್ಗದಲ್ಲೇ ಪ್ರತಿದಿನ ಬೆಳಗ್ಗಿನ ಜಾವದಿಂದ ಸುಮಾರು 139 ಬಸ್ ಟ್ರಿಪ್‌ಗಳು ಸಂಚರಿಸುತ್ತಿದ್ದು, ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರು ಹಾಗೂ ಪ್ರವಾಸಿಗರಿಗೆ ಈ ಯೋಜನೆ ಮತ್ತಷ್ಟು ಅನುಕೂಲ ಕಲ್ಪಿಸಲಿದೆ.
ಕರ್ನಾಟಕ ಮತ್ತು ಕೇರಳದ ಉಚಿತ ಬಸ್ ಯೋಜನೆಗಳು ಒಂದೇ ವೇಳೆ ಪ್ರಯೋಜನ ನೀಡುತ್ತಿರುವುದರಿಂದ ಗಡಿ ಭಾಗದ ಮಹಿಳೆಯರಿಗೆ ಇದು ನಿಜಕ್ಕೂ ‘ಡಬಲ್ ಧಮಾಕಾ’ ಆಗಿದೆ.

















