ಮಣಿಪಾಲ: ಅಂಗಾಂಗ ದಾನ, ಚರ್ಮದಾನ ಹಾಗೂ ಕೂದಲು ದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಮಾಹೆ ಮಣಿಪಾಲದ ಸಹಯೋಗದಲ್ಲಿ ವಿಶೇಷ ಬೈಕ್ ರೈಡ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷರು ಹಾಗೂ ಈ ಅಭಿಯಾನದ ಮುಂದಾಳತ್ವ ವಹಿಸಿರುವ ರೋ. ಡಾ. ದೀಪಕ್ ರಾಮ್ ಬಾಯಿರಿ ತಿಳಿಸಿದ್ದಾರೆ.
ಜೂನ್ 12 ರಿಂದ 24, 2026ರವರೆಗೆ ನಡೆಯಲಿರುವ ಈ ಅಭಿಯಾನವು ಚಂಡೀಗಢದಿಂದ ಆರಂಭಗೊಂಡು ಹಿಮಾಲಯದ ತಪ್ಪಲಿನ ಶಿಮ್ಲಾ, ಕಾಜಾ, ಲೋಸರ್ ಹಾಗೂ ಮನಾಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಲಿದೆ. ಈ ಸಂದರ್ಭದಲ್ಲಿ ಅಲ್ಲಿನ ರೋಟರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಥಳೀಯ ಜನರಿಗೆ ಅಂಗಾಂಗ ದಾನ, ಚರ್ಮದಾನ ಹಾಗೂ ಕೂದಲು ದಾನದ ಅಗತ್ಯತೆ ಮತ್ತು ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುವುದು.

ಅಭಿಯಾನದಲ್ಲಿ ಭಾಗವಹಿಸುತ್ತಿರುವ ಐವರು ರೋಟರಿಯನ್ನರು ಸುಮಾರು 1,200 ಕಿಲೋಮೀಟರ್ಗಳಷ್ಟು ದೂರ ಬೈಕ್ ಮೂಲಕ ಸಂಚರಿಸಿ, ದಾನಗಳ ಮಹತ್ವ ಹಾಗೂ ಅವುಗಳಿಂದ ಅನೇಕ ಜೀವಗಳಿಗೆ ದೊರೆಯುವ ಹೊಸ ಬದುಕಿನ ಅವಕಾಶಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಅಭಿಯಾನದ ವಿಶೇಷ ಅಂಗವಾಗಿ ಜೂನ್ 22 ರಂದು ಚಂಡೀಗಢ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಚಂಡೀಗಢ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ರೋ. ಡಾ. ರವಿರಾಜ್ ಎನ್.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಅಂಗಾಂಗ ದಾನ ಹಾಗೂ ಮಾನವೀಯ ಸೇವೆಯ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶ ಹೊಂದಿದೆ.

ಈ ಕುರಿತು ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಅಭಿಯಾನದ ಸವಾರರಾದ ರೋ. ಡಾ. ಶ್ರೀಧರ್, ರೋ. ಡಾ. ಕುಮಾರ್ ಭಟ್, ರೋ. ಡಾ. ಗುರುಮೂರ್ತಿ, ರೋ. ಡಾ. ವಾಸುದೇವ ಪೈ ವೆಂಕಟೇಶ್ ಹಾಗು ಪ್ರಶಾಂತ್ ಉಪಸ್ಥಿತರಿದ್ದರು.















