ಮನಿಲಾ: ದಕ್ಷಿಣ ಫಿಲಿಪೈನ್ಸ್ ನ ಮಿಂಡನಾವೊ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಸಾವನ್ನಪ್ಪಿದವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 7.8 ರಷ್ಟು ತೀವ್ರತೆಯ ಈ ವಿನಾಶಕಾರಿ ಭೂಕಂಪದಿಂದಾಗಿ ನೂರಾರು ಕಟ್ಟಡಗಳು ನೆಲಸಮಗೊಂಡಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಭೂಕಂಪದ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದ್ದು, ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿತ್ತು.
ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಭೂಕಂಪದಲ್ಲಿ 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ವಿಪತ್ತು ನಿರ್ವಹಣಾ ಪಡೆಗಳು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ ಕೈಗೊಂಡಿವೆ.
ಸುಡುಬಿಸಿಲಿನಲ್ಲಿ ಬಯಲು ಆಸ್ಪತ್ರೆ: ಟೆಂಟ್‌ಗಳಲ್ಲೇ ಶಿಶು ಜನನ!
ಭೂಕಂಪದ ತೀವ್ರತೆಗೆ ಆಸ್ಪತ್ರೆಗಳ ಕಟ್ಟಡಗಳು ಬಿರುಕು ಬಿಟ್ಟಿದ್ದು, ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ ರೋಗಿಗಳನ್ನು ಆಸ್ಪತ್ರೆಯಿಂದ ಹೊರತಂದು ತೆರೆದ ಮೈದಾನಗಳಲ್ಲಿ ಹಾಸಿಗೆ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ.
ಜನರಲ್ ಸ್ಯಾಂಟೋಸ್ ನಗರದ ಹೊರವಲಯದ ಆಸ್ಪತ್ರೆಯೊಂದರಲ್ಲಿ, ಸುಡುಬಿಸಿಲಿನಲ್ಲೇ ತಾತ್ಕಾಲಿಕವಾಗಿ ನಿರ್ಮಿಸಲಾದ ಪರದೆಯ ಮರೆಯಲ್ಲಿ ತಾಯಿಯೊಬ್ಬಳಿಗೆ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಮತ್ತೊಂದೆಡೆ, ಗ್ಲಾನ್ ಮುನ್ಸಿಪಾಲಿಟಿಯಲ್ಲಿ ಆಸ್ಪತ್ರೆ ಕಟ್ಟಡಕ್ಕೆ ತೀವ್ರ ಹಾನಿಯಾದ ಹಿನ್ನೆಲೆಯಲ್ಲಿ 60 ಕ್ಕೂ ಹೆಚ್ಚು ರೋಗಿಗಳಿಗೆ ಬಯಲಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.
ಸಂಪರ್ಕ ಕಡಿತಗೊಂಡ ಹಳ್ಳಿಗಳು
ಭೂಕಂಪದಿಂದಾಗಿ ರಸ್ತೆಗಳು ಸೀಳು ಬಿಟ್ಟಿದ್ದು, ಪ್ರಮುಖ ಸೇತುವೆಯೊಂದು ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಹಲವು ಹಳ್ಳಿಗಳು ಇಡೀ ದೇಶದಿಂದಲೇ ಸಂಪರ್ಕ ಕಡಿತಗೊಂಡಿದ್ದು, ಮುಂದಿನ ಒಂದು ವಾರ ಇವುಗಳನ್ನು ತಲುಪುವುದು ಅಸಾಧ್ಯವಾಗಿದೆ. ಅತ್ಯಂತ ಹೆಚ್ಚು ಹಾನಿಗೊಳಗಾಗಿರುವ ಸರಂಗನಿ ಪ್ರಾಂತ್ಯದ ಕೆಲವು ಪ್ರದೇಶಗಳಿಗೆ ಪ್ರಸ್ತುತ ಕೇವಲ ಹೆಲಿಕಾಪ್ಟರ್ ಮೂಲಕ ಮಾತ್ರ ತಲುಪಲು ಸಾಧ್ಯವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ, ಬೃಹತ್ ಶಾಪಿಂಗ್ ಮಾಲ್‌ಗಳು ಮತ್ತು ಶಾಲಾ ಕಟ್ಟಡಗಳು ಕ್ಷಣಮಾತ್ರದಲ್ಲಿ ಕುಸಿದು ಬೀಳುತ್ತಿರುವುದು ಹಾಗೂ ಶಾಲಾ ಮಕ್ಕಳು ಭಯದಿಂದ ಚೀರಾಡುತ್ತಿರುವುದು ದಾಖಲಾಗಿದೆ.
ಜಪಾನ್ ದೇಶದಲ್ಲೂ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಕೇವಲ 20 ಸೆಂ.ಮೀ. ಎತ್ತರದ ಸಣ್ಣ ಅಲೆಗಳು ಮಾತ್ರ ಕರಾವಳಿ ತಲುಪಿದ ಕಾರಣ ಸುನಾಮಿ ಭೀತಿ ದೂರವಾಗಿದ್ದು, ಮುನ್ನೆಚ್ಚರಿಕೆಯನ್ನು ಹಿಂಪಡೆಯಲಾಗಿದೆ.















