-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಇಲ್ಲಿನ ಖಾರ್ವಿಕೇರಿಯ ಈಜು ಪ್ರತಿಭೆ ಕುಂದಾಪುರ ಭಂಡಾರ್ಸ್ಕಾರ್ಸ್ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಸಂಪತ್ ಡಿ ಖಾರ್ವಿ ಕಾಲಿಗೆ ಸರಪಳಿ ಕಟ್ಟಿ 25ಕಿಮೀ ಈಜುವ ಮೂಲಕ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಭಾನುವಾರ ಮಧ್ಯಾಹ್ನ 2ಗಂಟೆಗೆ ಬಸ್ರೂರು ರೈಲು ಸೇತುವೆ ಬಳಿಯಿಂದ ನದಿಗೆ ಇಳಿದು ಈಜಲು ಆರಂಭಿಸಿದ ಸಂಪತ್ ಸಂಜೆ 5ಗಂಟೆ 5ನಿಮಿಷಕ್ಕೆ 25ಕಿ.ಮೀ ದೂರದ ಗಂಗೊಳ್ಳಿ ಬಂದರುವಿಗೆ ತಲುಪಿದ್ದಾರೆ.
ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿಯವರು ಸಂಪತ್ ಅವರ ಕಾಲುಗಳಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸರಪಳಿಗಳನ್ನು ತೊಡಿಸುವ ಮೂಲಕ ಆರಂಭಗೊಂಡ ಸಂಪತ್ ಅವರ ಈಜು ಯಾತ್ರೆ ಮೂರು ಗಂಟೆ ಐದು ನಿಮಿಷಗಳ ಕಾಲ ಅವಿರತವಾಗಿ ನಡೆದು ಸಂಜೆ ಐದು ಗಂಟೆ ಐದು ನಿಮಿಷಕ್ಕೆ ಗಂಗೊಳ್ಳಿ ಬಂದರುವಿನಲ್ಲಿ ಅಂತ್ಯಗೊಂಡಿತು.
ಸಂಪತ್ ಅವರಿಗೆ ರಕ್ಷಣಾವ್ಯೂಹವಾಗಿ ಈಜುಗಾರರಾದ ಸಂಪತ್ ತಂದೆ ದೇವರಾಯ್ ಖಾರ್ವಿ, ಸುಬ್ರಹ್ಮಣ್ಯ ಖಾರ್ವಿ, ಮಣಿ ಖಾರ್ವಿ, ರಂಜಿತ್ ಖಾರ್ವಿ, ಹರೀಶ ಖಾರ್ವಿ ಮುಂತಾದವರು 25 ಕಿ.ಮೀ. ನಷ್ಟು ಕ್ರಮಿಸಿ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರಾದ ವಿಜಯ ಶಂಕರ್, ದೈಹಿಕ ಶಿಕ್ಷಕ ಆನಂದ ಪೂಜಾರಿ, ತಲ್ಲೂರು ಗ್ರಾ. ಪಂ. ಸದಸ್ಯ ಸುನೀಲ್ ಖಾರ್ವಿ ತಲ್ಲೂರು, ಹರ್ಷವರ್ಧನ್, ಅಶೋಕ್ ಕೆರೆಕಟ್ಟೆ. ಮಾನಸ ಜ್ಯೋತಿಯ ಮುಖ್ಯಸ್ಥೆ ಶೋಭಾ ಮಧ್ಯಸ್ಥ ಸಹಿತ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದು ಸಂಪತ್ ಅವರಿಗೆ ಶುಭ ಕೋರಿದರು.
ಹಾದಿಯೂದಕ್ಕೂ ದೋಣಿಗಳಲ್ಲಿ ಹಿಂಬಾಲಿಸಿದ ಅಭಿಮಾನಿಗಳು:
ಸಂಪತ್ ಅವರು ನದಿಯಲ್ಲಿ ಸಾಗಿದ ಹಾದಿಯುದ್ದಕ್ಕೂ ದೋಣಿಗಳಲ್ಲಿ ಹಿಂಬಾಲಿಸಿದ ಅಭಿಮಾನಿಗಳು ಡೋಲು ಚಂಡೆ ವಾದನಗಳನ್ನು ಬಾರಿಸುವ ಮೂಲಕ ಸಂಪತ್ ಅವರಿಗೆ ಹುರಿದುಂಬಿಸಿದರು. ತೀರದ ಉದ್ದಕ್ಕೂ ಕಾದು ಕುಂತಿದ್ದ ಸಾವಿರಾರು ಸಾರ್ವಜನಿಕರು ಸಂಪತ್ ಅವರ ಸಾಹಸಗಾಥೆಯನ್ನು ಕಣ್ತುಂಬಿ ಕೊಂಡು ಹರಿಸಿದರು.
ಈಜು ಕಲಿತ ನದಿಯಲ್ಲೇ ದಾಖಲೆ ಬರೆದ ಛಲಗಾರ:
ಸಂಪತ್ ತಂದೆ ದೇವರಾಯ್ ಖಾರ್ವಿ ಮೀನುಗಾರರಾಗಿದ್ದು, ಪಂಚಗಂಗಾವಳಿ ನದಿ ತೀರದ ನಿವಾಸಿಗಳಾಗಿದ್ದಾರೆ. ಸಂಪತ್ಗೆ ತಂದೆ ದೇವರಾಯ್ ಏಳನೇ ತರಗತಿಯಲ್ಲಿರುವಾಗಲೇ ಮನೆ ಎದುರಿನ ಪಂಚಗಂಗಾವಳಿ ನದಿಯಲ್ಲಿ ಈಜು ತರಬೇತಿ ನೀಡಿದ್ದರು. ಸಂಪತ್ ಚಿಕ್ಕಪ್ಪ ದಯಾನಂದ ಖಾರ್ವಿಯೂ ಕೂಡ ಬೆಂಗಳೂರಿನಲ್ಲಿ ಖ್ಯಾತ ಈಜು ತರಬೇತುದಾರರಾಗಿದ್ದು, ಸಂಪತ್ ಸಾಧನೆಗೆ ಅವರ ಕಾಣಿಕೆಯೂ ಇದೆ.
ಚಿಕ್ಕ ಮಕ್ಕಳಿಗೆ ತರಬೇತುದಾರ ಸಂಪತ್:
ಕುಂದಾಪುರ ಸಮೀಪದ ಈಸ್ಟ್ವೆಸ್ಟ್ ಈಜುಕೊಳದಲ್ಲಿ ಬೇಸಿಗೆ ಶಿಬಿರದಲ್ಲಿ ಸಂಪತ್ ಚಿಕ್ಕಪ್ಪ ದಯಾನಂದ ಖಾರ್ವಿ ಈಜು ತರಬೇತಿ ತರಗತಿಯನ್ನು ನಡೆಸುತ್ತಿದ್ದು, ಅಲ್ಲಿ ಸಂಪತ್ ಪುಟ್ಟ ಮಕ್ಕಳಿಗೆ ಈಜು ತರಬೇತು ನೀಡುತ್ತಿದ್ದಾರೆ.
ಮಗನಿಗೆ ತಂದೆಯೇ ಲೈಫ್ಗಾರ್ಡ್!
ಸಂಪತ್ ಕಾಲಿಗೆ ಸರಪಳಿ ಕಟ್ಟಿ ಈಜುತ್ತಿರುವ ವೇಳೆಯಲ್ಲಿ ಅವರ ತಂದೆ ದೇವರಾಯ್ ಸಂಪತ್ ಹಿಂದೆಯೇ ಈಜಿಕೊಂಡು ಮಗನಿಗೆ ಲೈಫ್ಗಾರ್ಡ್ ಆಗಿ ಹಾದಿಯೂದ್ದಕ್ಕೂ ಮಗನಿಗೆ ಪ್ರೋತ್ಸಾಹ ನೀಡುತ್ತಲೇ ಸಾಗಿದರು. ದೇವರಾಜ್ ಜೊತೆಗೆ ಇನ್ನೂ ಮೂರು ಈಜುಪಟುಗಳು ಸಂಪತ್ ರಕ್ಷಣೆಗಾಗಿ ಈಜುತ್ತಲೇ ದಾರಿ ತೋರಿಸುತ್ತಾ ಸಾಗಿದರು.
ಗಂಗೊಳ್ಳಿಯಲ್ಲಿ ಸನ್ಮಾನ:
ಯಶಸ್ವಿಯಾಗಿ ಈಜಿ ಗಂಗೊಳ್ಳಿ ಬಂದರು ತಲುಪಿದ ಸಂಪತ್ಗೆ ಯುವ ಬ್ರಿಗೇಡ್ ಕುಂದಾಪುರದ ವತಿಯಿಂದ ಸನ್ಮಾನ ಮಾಡಲಾಯಿತು. ಗಂಗೊಳ್ಳಿ ಠಾಣಾಧಿಕಾರಿ ವಾಸಪ್ಪ ನಾಯ್ಕ್ ಸಂಪತ್ ಕಾಲಿಗೆ ತೊಡಿಸಿದ್ದ ಸರಪಳಿ ಬೀಗವನ್ನು ತೆಗೆದು ಶುಭಹಾರೈಸಿದರು. ಗಂಗೊಳ್ಳಿಯ ಬಂದರುವಿನಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಈಜುಪಟು ಸಂಪತ್ಗೆ ಹಸ್ತಲಾಘವ ನೀಡಿ ಶುಭಹಾರೈಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ವೇಳೆಯಲ್ಲಿ ಯುವಬ್ರಿಗೇಡ್ನ ವಿನೋದ್ ಶಾತಿನಿಕೇತನ್, ಗುರುರಾಜ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಹೆಚ್ಚು ತರಬೇತಿ ನಡೆಸಿಲ್ಲ:
ಏಳನೇ ತರಗತಿಯಲ್ಲಿರುವಾಗಲೇ ತಂದೆ ಈಜು ತರಬೇತಿ ನೀಡಿದ್ದರು. ಪಂಚಾಗಂಗಾವಳಿ ನದಿಯಲ್ಲಿ ಈಜು ಕಲಿತ ನಾನು ಇದೇ ನದಿಯಲ್ಲಿ ದಾಖಲೆ ಬರೆದಿದ್ದು ಹೆಮ್ಮೆ ಅನ್ನಿಸುತ್ತಿದೆ. ಕೇವಲ ಹತ್ತು ದಿನಗಳ ತಯಾರಿಯಲ್ಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಮುಂದಿನ ಗುರಿ ಎರಡು ಕೈಗಳು ಹಾಗೂ ಎರಡು ಕಾಲುಗಳಿಗೆ ಸರಪಳಿ ಕಟ್ಟಿ ಈಜಿ ದಾಖಲೆ ಬರೆಯಬೇಕು ಎನ್ನುವುದು. ನನ್ನ ಪ್ರತೀ ಹೆಜ್ಜೆಯಲ್ಲೂ ನನ್ನ ತಂದೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಅವರ ಪ್ರೋತ್ಸಾಹವೇ ನನ್ನ ಸಾಧನೆಗೆ ಸ್ಪೂರ್ತಿ ಎನ್ನುತ್ತಾರೆ ಈಜುಪಟು ಸಂಪತ್