ನವದೆಹಲಿ: ಕಳೆದ ಕೆಲವು ದಿನಗಳಿಂದ ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈ K. Annamalai ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ಊಹಾಪೋಹಗಳಿಗೆ ಇದೀಗ ಅಧಿಕೃತ ರೂಪ ಸಿಕ್ಕಿದೆ. ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಅವರು ಮಂಗಳವಾರ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಾಹಿತಿಯ ಪ್ರಕಾರ, ಅಣ್ಣಾಮಲೈ ಅವರು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ Nitin Nabin ಅವರಿಗೆ ಐದು ಪುಟಗಳ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ B. L. Santhosh ಅವರ ಉಪಸ್ಥಿತಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ತಮ್ಮ ಮುಂದಿನ ರಾಜಕೀಯ ಪಯಣವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ಬಳಿಕ ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ Amit Shah ಅವರನ್ನು ಭೇಟಿಯಾಗಲಿದ್ದು, ಬಳಿಕ ಚೆನ್ನೈಗೆ ಮರಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಬಿಜೆಪಿ ನಾಯಕತ್ವವು ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿದ್ದು, ರಾಷ್ಟ್ರೀಯ ಮಟ್ಟದ ಜವಾಬ್ದಾರಿಗಳು ಹಾಗೂ ರಾಜ್ಯಸಭಾ ಅವಕಾಶಗಳನ್ನೂ ನೀಡಲು ಮುಂದಾಗಿತ್ತು. ಆದರೆ ಅಣ್ಣಾಮಲೈ ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದರು ಎನ್ನಲಾಗಿದೆ.
ಹೊಸ ಪಕ್ಷ ಸ್ಥಾಪನೆಗೆ ಸಿದ್ಧತೆ?
ಅಣ್ಣಾಮಲೈ ಅವರು ಶೀಘ್ರದಲ್ಲೇ ಹೊಸ ರಾಜಕೀಯ ಸಂಘಟನೆ ಅಥವಾ ಪಕ್ಷವನ್ನು ಆರಂಭಿಸುವ ಸಾಧ್ಯತೆ ಇದೆ ಎಂಬ ವರದಿಗಳು ಹರಿದಾಡುತ್ತಿವೆ. ತಮಿಳುನಾಡಿನಲ್ಲಿ ನಟ-ರಾಜಕಾರಣಿ ವಿಜಯ್ Vijay ಅವರ ರಾಜಕೀಯ ಯಶಸ್ಸಿನ ಬಳಿಕ, ಅಣ್ಣಾಮಲೈ ಕೂಡ ಪ್ರಾದೇಶಿಕ ಪಕ್ಷದ ಮೂಲಕ ತಮ್ಮದೇ ರಾಜಕೀಯ ನೆಲೆ ಕಟ್ಟಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಹೊಸ ಪಕ್ಷವು “ಡ್ರಾವಿಡಿಯನ್ 2.0” ಪರಿಕಲ್ಪನೆಯೊಂದಿಗೆ ತಮಿಳುನಾಡಿನ ಹಿತಾಸಕ್ತಿಗಳನ್ನು ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಜೋಡಿಸುವ ಗುರಿ ಹೊಂದಿರಬಹುದು ಎಂದು ವರದಿಗಳು ಸೂಚಿಸಿವೆ.
ಅಣ್ಣಾಮಲೈ ಅವರ ಮುಂದಿನ ನಡೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗಬಹುದೇ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.

















