ಹೆಬ್ರಿಯ ಉದ್ಯಮಿ ಮನೆಯಲ್ಲಿ ಕಳ್ಳತನ- ಮೂವರು‌ ಆರೋಪಿಗಳ ಬಂಧನ

ಉಡುಪಿ: ಹೆಬ್ರಿಯ ಅನಂತನಗರದಲ್ಲಿರುವ ಉದ್ಯಮಿ ಕೀರ್ತನ್ ಪ್ರಭು ಅವರ ಮನೆಯಲ್ಲಿ ನಡೆದಿದ್ದ ಸುಮಾರು ₹60 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ಇತರೆ ಬೆಲೆಬಾಳುವ ವಸ್ತುಗಳ ಕಳ್ಳತನ ಪ್ರಕರಣವನ್ನು ಹೆಬ್ರಿ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ತಮಿಳುನಾಡು ಮೂಲದ, ಪ್ರಸ್ತುತ ಕೇರಳದಲ್ಲಿ ವಾಸವಾಗಿರುವ ಸಲೀಂ, ಮೂಡುಬಿದಿರೆಯ ಮಿಜಾರು ನಿವಾಸಿ ಹರೀಶ್ ಶೆಟ್ಟಿ ಹಾಗೂ ಕೇರಳದ ಕಾಸರಗೋಡು ಮೂಲದ ಮಹಮ್ಮದ್ ಸಫ್ಘಾನ್ ಎಂದು ಗುರುತಿಸಲಾಗಿದೆ.

ಕೆಲವು ದಿನಗಳ ಹಿಂದೆ ಕೀರ್ತನ್ ಪ್ರಭು ಅವರ ಮನೆಗೆ ನುಗ್ಗಿದ್ದ ಕಳ್ಳರು ಚಿನ್ನಾಭರಣ, ಬೆಳ್ಳಿ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಹೆಬ್ರಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ಕಳವುಗೈದ ಚಿನ್ನಾಭರಣ, ಬೆಳ್ಳಿ ಆಭರಣಗಳು ಹಾಗೂ ಹವಳವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಸುಮಾರು ₹4 ಲಕ್ಷ ಮೌಲ್ಯದ ಮಾರುತಿ ಆಲ್ಟೊ ಕಾರನ್ನೂ ಜಪ್ತಿ ಮಾಡಲಾಗಿದೆ.

ಒಟ್ಟು ₹37.87 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಇತರೆ ಕಳವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.