IPL 2026: RCBಗೆಲುವಿನ ಬೆನ್ನಲ್ಲೇ ಪತ್ನಿ ಅನುಷ್ಕಾ ಜೊತೆ ಕೊಹ್ಲಿ ಸಖತ್ ಡ್ಯಾನ್ಸ್!

ಅಹಮದಾಬಾದ್: ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ.
ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಸಂಭ್ರಮಾಚರಣೆಯಲ್ಲಿ ಕುಣಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಟೂರ್ನಿಯುದ್ದಕ್ಕೂ ಭರ್ಜರಿ ಫಾರ್ಮ್‌ ನಲ್ಲಿದ್ದ ವಿರಾಟ್ ಕೊಹ್ಲಿ, ಫೈನಲ್ ಪಂದ್ಯದಲ್ಲೂ ಅಜೇಯ 75 ರನ್ ಸಿಡಿಸುವ ಮೂಲಕ ಆರ್‌ಸಿಬಿ ಕೇವಲ 18 ಓವರ್‌ಗಳಲ್ಲಿ 156 ರನ್‌ಗಳ ಗುರಿಯನ್ನು ತಲುಪಲು ಪ್ರಮುಖ ಕಾರಣರಾದರು.

ಗೆಲುವಿನ ನಂತರ ಪೋಸ್ಟ್-ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಕೊಹ್ಲಿ, “ಇದು ಕನಸು ನನಸಾದ ಕ್ಷಣ. ಗೆಲುವಿನ ರನ್ ಬಾರಿಸಬೇಕು ಎಂದು ನಾನು ಹಲವು ಬಾರಿ ಯೋಚಿಸಿದ್ದೆ,” ಎಂದು ಭಾವುಕರಾಗಿ ನುಡಿದರು.
ಪಂದ್ಯದ ಬಳಿಕ ಆರ್‌ಸಿಬಿ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ದಿನೇಶ್ ಕಾರ್ತಿಕ್ ಹಾಗೂ ತಂಡದ ಇತರ ಸದಸ್ಯರೊಂದಿಗೆ ಸಂಭ್ರಮದಿಂದ ನೃತ್ಯ ಮಾಡುತ್ತಿರುವ ದೃಶ್ಯಗಳು ಅಭಿಮಾನಿಗಳ ಮನ ಗೆದ್ದಿವೆ.