ಭಾರತದಲ್ಲಿ ಶೀಘ್ರವೇ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲಿದೆ ಆರ್ ಬಿ ಐ!

ನವದೆಹಲಿ: ಭಾರತದಲ್ಲಿ ಶೀಘ್ರದಲ್ಲೇ ₹100, ₹200 ಮತ್ತು ₹500 ಮುಖಬೆಲೆಯ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳು ಚಲಾವಣೆಗೆ ಬರಬಹುದೆಂಬ ಚರ್ಚೆಗಳು ಮತ್ತೆ ಜೋರಾಗಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪಾಲಿಮರ್ ನೋಟುಗಳ ಪರಿಚಯಕ್ಕೆ ಸಂಬಂಧಿಸಿದ ತನ್ನ ಬಹುಕಾಲದ ಯೋಜನೆಯನ್ನು ಪುನರುಜ್ಜೀವನಗೊಳಿಸಿದ್ದು, ಶೀಘ್ರದಲ್ಲೇ ಪೈಲಟ್ ಯೋಜನೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಇತ್ತೀಚೆಗೆ ನಡೆದ ಆರ್‌ಬಿಐ ಮಂಡಳಿಯ ಸಭೆಗಳಲ್ಲಿ ಪಾಲಿಮರ್ ಕರೆನ್ಸಿ ಕುರಿತು ಮಹತ್ವದ ಚರ್ಚೆಗಳು ನಡೆದಿವೆ. ಯೋಜನೆ ಯಶಸ್ವಿಯಾದರೆ ಭಾರತೀಯ ಕರೆನ್ಸಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ.

ಯಾಕೆ ಪ್ಲಾಸ್ಟಿಕ್ ಪಾಲಿಮರ್ ನೋಟು?

ಪಾಲಿಮರ್ ನೋಟುಗಳು ಸಾಮಾನ್ಯ ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರುವುದಾಗಿ ಪರಿಗಣಿಸಲಾಗುತ್ತದೆ. ಇವು ಸುಲಭವಾಗಿ ಹರಿದು ಹೋಗುವುದಿಲ್ಲ ಹಾಗೂ ನೀರು ಮತ್ತು ತೇವಾಂಶದಿಂದ ಹಾನಿಯಾಗುವ ಸಾಧ್ಯತೆಯೂ ಕಡಿಮೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಸೇರಿದಂತೆ ಹಲವು ದೇಶಗಳು ಈಗಾಗಲೇ ಪಾಲಿಮರ್ ಕರೆನ್ಸಿಯನ್ನು ಬಳಸುತ್ತಿವೆ.

ಭಾರತದಂತಹ ದೊಡ್ಡ ದೇಶದಲ್ಲಿ ನೋಟುಗಳು ಶೀಘ್ರವಾಗಿ ಹಾಳಾಗುವ ಹಿನ್ನೆಲೆಯಲ್ಲಿ ಪಾಲಿಮರ್ ನೋಟುಗಳು ಉತ್ತಮ ಪರ್ಯಾಯವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ನಕಲಿ ನೋಟುಗಳ ಹಾವಳಿಯನ್ನು ನಿಯಂತ್ರಿಸುವಲ್ಲಿಯೂ ಇವು ಪರಿಣಾಮಕಾರಿ ಎನ್ನಲಾಗಿದೆ.

ಪಾಲಿಮರ್ ನೋಟುಗಳ ಉತ್ಪಾದನಾ ವೆಚ್ಚ ಆರಂಭದಲ್ಲಿ ಸಾಮಾನ್ಯ ಕಾಗದದ ನೋಟುಗಳಿಗಿಂತ 2 ರಿಂದ 3 ಪಟ್ಟು ಹೆಚ್ಚಾಗಬಹುದು. ಆದರೆ ಅವುಗಳ ಜೀವಿತಾವಧಿ ಹೆಚ್ಚು ಇರುವುದರಿಂದ ದೀರ್ಘಾವಧಿಯಲ್ಲಿ ಕರೆನ್ಸಿ ನಿರ್ವಹಣಾ ವೆಚ್ಚ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಹತ್ತಿ ಆಧಾರಿತ ಕಾಗದದ ಬದಲಿಗೆ ವಿಶೇಷ ಪಾಲಿಪ್ರೊಪಿಲೀನ್ ವಸ್ತುವಿನಿಂದ ಈ ನೋಟುಗಳನ್ನು ತಯಾರಿಸಲಾಗುತ್ತದೆ. ಎಂಬೆಡೆಡ್ ಹೊಲೊಗ್ರಾಫಿಕ್ ಅಂಶಗಳು ಸೇರಿದಂತೆ ಹಲವು ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿರುವುದರಿಂದ ನಕಲಿ ಮಾಡುವುದು ಕಷ್ಟಕರವಾಗುತ್ತದೆ.

ಮತ್ತೆ ಯೋಜನೆ ಮುನ್ನೆಲೆಗೆ:

ಗಮನಾರ್ಹ ಸಂಗತಿಯೆಂದರೆ, ಭಾರತದಲ್ಲಿ ಪಾಲಿಮರ್ ನೋಟುಗಳ ಕುರಿತ ಚರ್ಚೆ ಹೊಸದಲ್ಲ. ಸುಮಾರು ಒಂದು ದಶಕದ ಹಿಂದೆಯೂ ಆರ್‌ಬಿಐ ಈ ಯೋಜನೆಯನ್ನು ಪರಿಶೀಲಿಸಿತ್ತು. ಆದರೆ ವಿವಿಧ ತಾಂತ್ರಿಕ ಕಾರಣಗಳಿಂದ ಅದು ಮುಂದುವರಿಯಲಿಲ್ಲ. ಇದೀಗ ಹೆಚ್ಚುತ್ತಿರುವ ನಗದು ಬೇಡಿಕೆ ಮತ್ತು ಕರೆನ್ಸಿ ನಿರ್ವಹಣಾ ವೆಚ್ಚದ ಹಿನ್ನೆಲೆಯಲ್ಲಿ ಈ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ.

ಆದಾಗ್ಯೂ, ಪಾಲಿಮರ್ ನೋಟುಗಳ ಬಿಡುಗಡೆ ಕುರಿತು ಆರ್‌ಬಿಐ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಪೈಲಟ್ ಯೋಜನೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.