ನವದೆಹಲಿ: ಜನಪ್ರಿಯ ಐಸ್ಕ್ರೀಮ್ ತಯಾರಿಕಾ ಸಂಸ್ಥೆ ಕ್ವಾಲಿಟಿ ವಾಲ್ಸ್ Kwality Wall’s ತನ್ನ ಎಲ್ಲಾ ಉತ್ಪನ್ನಗಳನ್ನು ಇನ್ನು ಮುಂದೆ ಸಂಪೂರ್ಣ ಹಾಲು ಆಧಾರಿತ ಐಸ್ಕ್ರೀಮ್ಗಳಾಗಿ ಮಾರಾಟ ಮಾಡುವುದಾಗಿ ಘೋಷಿಸಿದೆ. ಈ ಮೂಲಕ ಸಂಸ್ಥೆ ತನ್ನ “ಫ್ರೋಜನ್ ಡೆಸರ್ಟ್” ಮಾದರಿಯಿಂದ ಸಂಪೂರ್ಣವಾಗಿ ಹೊರಬಂದು ನೈಜ ಐಸ್ಕ್ರೀಮ್ ಉತ್ಪನ್ನಗಳತ್ತ ಹೆಜ್ಜೆ ಇಟ್ಟಿದೆ. ಈ ಹೇಳಿಕೆಯಿಂದ ಹಾಗಾದ್ರೆ ನಾವೆಲ್ಲಾ ಇಷ್ಟು ದಿನ ತಿಂದ ಐಸ್ ಕ್ರೀಂ ಗಳಲ್ಲಿ ಹಾಲಿನ ಅಂಶಗಳೇ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.
ಸಂಸ್ಥೆಯ ಜನಪ್ರಿಯ ಬ್ರ್ಯಾಂಡ್ಗಳಾದ Magnum ಹಾಗೂ Cornetto ಸೇರಿದಂತೆ ಎಲ್ಲಾ ಉತ್ಪನ್ನಗಳನ್ನು ಹಾಲು ಆಧಾರಿತವಾಗಿ ಪರಿವರ್ತಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕಂಪೆನಿಯ ಪೀಟರ್ ಕುಲ್ವೇ , “ನಾವು ಇನ್ನು ಮುಂದೆ ಫ್ರೋಜನ್ ಡೆಸರ್ಟ್ ಕಂಪನಿಯಲ್ಲ, ಐಸ್ಕ್ರೀಮ್ ಕಂಪನಿಯಾಗಿದ್ದೇವೆ. ಭಾರತದಲ್ಲಿ ಈಗಾಗಲೇ ಎಲ್ಲಾ ಉತ್ಪನ್ನಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿದ್ದೇವೆ” ಎಂದು ಹೇಳಿದ್ದಾರೆ.
ಇಷ್ಟು ದಿನ ನಾವು ತಿಂದಿದ್ದೇನು?
ಇಷ್ಟು ದಿನ ಕಂಪೆನಿಯ ಉತ್ಪನ್ನಗಳಲ್ಲಿ ಹಾಲಿನ ಬದಲು ಪಾಮ್ ಎಣ್ಣೆ ಸೇರಿದಂತೆ ಸಸ್ಯ ಮೂಲದ ಕೊಬ್ಬುಗಳನ್ನು ಬಳಸಲಾಗುತ್ತಿತ್ತು. ಭಾರತದಲ್ಲಿ ಗ್ರಾಹಕರು ಹಾಲು ಆಧಾರಿತ ಉತ್ಪನ್ನಗಳನ್ನು ಹೆಚ್ಚು ಗುಣಮಟ್ಟದ ಹಾಗೂ ಪೌಷ್ಟಿಕವೆಂದು ಪರಿಗಣಿಸುವ ಹಿನ್ನೆಲೆಯಲ್ಲಿ ಈ ಮಹತ್ವದ ಬದಲಾವಣೆ ಕೈಗೊಳ್ಳಲಾಗಿದೆ.ಪಾಮ್ ಎಣ್ಣೆಯಲ್ಲಿ ಸಿದ್ದವಾಗು ಐಸ್ ಕ್ರೀಂ ಗಳು ದೇಹಕ್ಕೆ ಹಾನಿಕಾರಕವೂ ಹೌದು.
ಈ ವರ್ಷ ಕಂಪನಿಯ ಉತ್ಪನ್ನಗಳ ಪೈಕಿ ಸುಮಾರು ಶೇ.50ರಷ್ಟು ಡೈರಿ ಆಧಾರಿತವಾಗಲಿದ್ದು, ಉಳಿದ ಉತ್ಪನ್ನಗಳನ್ನು ಮುಂದಿನ ವರ್ಷದಲ್ಲಿ ಸಂಪೂರ್ಣವಾಗಿ ಹಾಲು ಆಧಾರಿತ ಐಸ್ಕ್ರೀಮ್ಗಳಾಗಿ ಪರಿವರ್ತಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಜಾಗತಿಕ ಮಟ್ಟದಲ್ಲೂ ಬದಲಾವಣೆ
ಈ ನಿರ್ಧಾರ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಕಂಪನಿ ಕಾರ್ಯನಿರ್ವಹಿಸುತ್ತಿರುವ ಇತರೆ ದೇಶಗಳಲ್ಲಿಯೂ ಇದೇ ರೀತಿಯ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ. ಸುಮಾರು 200 ಮಿಲಿಯನ್ ಡಾಲರ್ ಮೌಲ್ಯದ ಭಾರತೀಯ ಮಾರುಕಟ್ಟೆ ಭವಿಷ್ಯದಲ್ಲಿ ಕಂಪನಿಯ ಅತಿದೊಡ್ಡ ಮಾರುಕಟ್ಟೆಯಾಗುವ ನಿರೀಕ್ಷೆಯಿದ್ದು, ಭಾರತದಲ್ಲಿ ಹೆಚ್ಚಿನ ಹೂಡಿಕೆಗೆ ಸಂಸ್ಥೆ ಸಜ್ಜಾಗಿದೆ.

















