ಉಡುಪಿ ಶ್ರೀಕೃಷ್ಣ ಮಠಕ್ಕೆ ತಾರಾ ದಂಪತಿ ವಸಿಷ್ಠ ಸಿಂಹ–ಹರಿಪ್ರಿಯಾ ಭೇಟಿ, ದೇವರ ದರ್ಶನ

ಉಡುಪಿ: ಕನ್ನಡ ಚಿತ್ರರಂಗದ ತಾರಾ ದಂಪತಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ತಮ್ಮ ಪುಟ್ಟ ಮಗುವಿನೊಂದಿಗೆ ಶನಿವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಮಠದ ಸಂಪ್ರದಾಯದಂತೆ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ದಂಪತಿ, ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅವರು ಪರ್ಯಾಯ ಶಿರೂರು ಮಠದ ಪೀಠಾಧಿಪತಿ ವೇದವರ್ಧನತೀರ್ಥ ಶ್ರೀಪಾದರು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಶ್ರೀಗಳು ದಂಪತಿ ಹಾಗೂ ಅವರ ಮಗುವಿಗೆ ಪ್ರಸಾದ ನೀಡಿ ಶುಭ ಹಾರೈಸಿದರು. ಅನಂತರ ಶ್ರೀಕೃಷ್ಣ ಮಠದ ಭೋಜನಗೃಹಕ್ಕೆ ತೆರಳಿದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ, ಇತರ ಭಕ್ತರೊಂದಿಗೆ ನೆಲದ ಮೇಲೆ ಕುಳಿತು ಅನ್ನಪ್ರಸಾದ ಸ್ವೀಕರಿಸಿದರು.

ನಟ ದಂಪತಿಯ ಮಠ ಭೇಟಿ ವೇಳೆ ಭಕ್ತರು ಹಾಗೂ ಅಭಿಮಾನಿಗಳು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರ ಭೇಟಿ ಗಮನ ಸೆಳೆಯಿತು.