ಮುಂಗಾರು ಮಳೆ ವಿಳಂಬ, ಈ ವರ್ಷ ಶೇ.4ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆ: ಐಎಂಡಿ

ಬೆಂಗಳೂರು: ಪ್ರಸಕ್ತ ಸಾಲಿನ ಮುಂಗಾರು ಮಳೆ ದೇಶಕ್ಕೆ ವಾಡಿಕೆಗಿಂತ ಸ್ವಲ್ಪ ತಡವಾಗಿ ಪ್ರವೇಶಿಸುವ ಸಾಧ್ಯತೆ ಇದ್ದು, ಒಟ್ಟಾರೆ ಮಳೆಯ ಪ್ರಮಾಣವೂ ಸಾಮಾನ್ಯಕ್ಕಿಂತ ಶೇ.10ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ಹವಾಮಾನ ತಜ್ಞರ ಅಂದಾಜಿನ ಪ್ರಕಾರ, ಈ ವರ್ಷದ ದೀರ್ಘಾವಧಿ ಸರಾಸರಿ ಮಳೆಯು ಶೇ.90ರಷ್ಟಿರಲಿದ್ದು, ಇದರಲ್ಲಿ ಶೇ.4ರಷ್ಟು ಹೆಚ್ಚು-ಕಡಿಮೆಯಾಗುವ ಸಾಧ್ಯತೆಯಿದೆ. 1971ರಿಂದ 2020ರವರೆಗಿನ ಅಂಕಿ-ಅಂಶಗಳ ಆಧಾರದ ಮೇಲೆ ದೇಶದ ಸರಾಸರಿ ಮಳೆಯ ಪ್ರಮಾಣವನ್ನು 87 ಸೆಂ.ಮೀ. ಎಂದು ಪರಿಗಣಿಸಲಾಗಿದೆ. ಮಳೆಯ ಪ್ರಮಾಣವು ಈ ಮಟ್ಟಕ್ಕಿಂತ ಕಡಿಮೆಯಾದರೆ ಅದನ್ನು ಅನಾವೃಷ್ಟಿ ಅಥವಾ ಬರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ.

ಈಶಾನ್ಯ ಭಾರತದಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆ ಇದ್ದರೂ, ಉಳಿದ ಬಹುತೇಕ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಕಾರಣವಾಗಿ ಎಲ್-ನಿನೋ ಪರಿಣಾಮವನ್ನು ಹವಾಮಾನ ಇಲಾಖೆ ಉಲ್ಲೇಖಿಸಿದೆ.

ಪೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನ ಏರಿಕೆಯಿಂದ ಉಂಟಾಗುವ ಎಲ್-ನಿನೋ ಪ್ರಕ್ರಿಯೆಯು ಜಾಗತಿಕ ಹವಾಮಾನ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ಭಾರತದ ಮುಂಗಾರು ಮಾರುತಗಳು ದುರ್ಬಲಗೊಂಡು ಮಳೆಯ ಪ್ರಮಾಣ ಕುಸಿಯುವ ಸಾಧ್ಯತೆ ಹೆಚ್ಚುತ್ತದೆ.

ಜೂನ್ ತಿಂಗಳಲ್ಲೇ ಎಲ್-ನಿನೋ ಪ್ರಭಾವ ಆರಂಭವಾಗಲಿದ್ದು, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ಅದರ ತೀವ್ರತೆ ಹೆಚ್ಚಾಗುವ ನಿರೀಕ್ಷೆಯಿದೆ. ಇದರಿಂದ ಕಳೆದ ಮೂರು ವರ್ಷಗಳಲ್ಲೇ ಕನಿಷ್ಠ ಪ್ರಮಾಣದ ಮಳೆಯಾಗುವ ಆತಂಕ ವ್ಯಕ್ತವಾಗಿದೆ.

ಮುಂಗಾರು ದುರ್ಬಲಗೊಂಡರೆ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದ್ದು, ಜಲಾಶಯಗಳ ನೀರಿನ ಮಟ್ಟ ಹಾಗೂ ಅಂತರ್ಜಲ ಸಂರಕ್ಷಣೆ ಕೂಡ ದೊಡ್ಡ ಸವಾಲಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.